ಗುಜರಾತ್ ಶಾಲೆಗಳಲ್ಲಿ ವಿದ್ಯಾರ್ಥಿಗಳೇ ವೈದ್ಯರಾಗಲಿದ್ದಾರೆ!

ಅಹ್ಮದಾಬಾದ್, ಜ.2: ಗುಜರಾತ್ನ ಗ್ರಾಮೀಣ ಭಾಗದಲ್ಲಿ ವೈದ್ಯರು ಅದರಲ್ಲೂ ಮುಖ್ಯವಾಗಿ ತಜ್ಞವೈದ್ಯರ ಕೊರತೆಯನ್ನು ನೀಗಿಸುವ ಸಲುವಾಗಿ ಗುಜರಾತ್ ಸರ್ಕಾರ ಬಾಲವೈದ್ಯ ಎಂಬ ವಿಶಿಷ್ಟ ಪರಿಕಲ್ಪನೆಯನ್ನು ಜಾರಿಗೆ ತಂದಿದೆ. ಈ ಬಾಲವೈದ್ಯರು ಶಾಲಾ ಮಕ್ಕಳ ಕಲ್ಯಾಣವನ್ನು ರಾಜ್ಯದ ಶಾಲಾ ಆರೋಗ್ಯ ಯೋಜನೆಯಡಿ ನಿರ್ವಹಿಸಲಿದ್ದಾರೆ.
ಅರವಲ್ಲಿ ಜಿಲ್ಲೆಯ ನವಗಾಂವ್ ಎಂಬ ಗ್ರಾಮದ ಸರ್ಕಾರಿ ಶಾಲೆಯ ಆರನೇ ತರಗತಿ ವಿದ್ಯಾರ್ಥಿ ಭೂಪತಿಭಾಯ್ ಕಾಂತ್ (11) ಎಂಬಾತನನ್ನು ರಾಜ್ಯದ ಮೊದಲ ಬಾಲವೈದ್ಯನಾಗಿ ನೇಮಕ ಮಾಡಲಾಗಿದೆ. ಇದು ಪ್ರಾಯೋಗಿಕ ಯೋಜನೆಯಾಗಿದ್ದು, ಬಾಲವೈದ್ಯರಿಗೆ ಸ್ಟೆಥಸ್ಕೋಪ್ ಹಾಗೂ ಆಯುರ್ವೇದಿಕ್ ಔಷಧಿಗಳನ್ನು ಒದಗಿಸಿ, ತಮ್ಮ ಸಹಪಾಠಿಗಳಿಗೆ ಚಿಕಿತ್ಸೆ ನೀಡಲು ಮೂಲಭೂತ ತರಬೇತಿ ನೀಡಲಾಗುತ್ತದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಯಾವುದೇ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಇವರಿಗೆ ಆಯುರ್ವೇದ ಔಷಧಿಗಳನ್ನು ನೀಡಲಾಗುತ್ತದೆ ಎಂದು ಅಧಿಕಾರಿ ವಿವರಿಸಿದ್ದಾರೆ. ಪ್ರಾಥಮಿಕ ಶಾಲೆಗಳಿಗೆ ಆರೋಗ್ಯ ಇಲಾಖೆ ನೀಡಿದ ಆದೇಶದ ಅನ್ವಯ, "ಪ್ರತಿ ಪ್ರಾಥಮಿಕ ಶಾಲೆಗಳಲ್ಲಿ ಒಬ್ಬ ಬಾಲವೈದ್ಯರನ್ನು ನೇಮಿಸಬೇಕು, ಇದನ್ನು ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಮಾಡಬೇಕಾಗುತ್ತದೆ"
"ಬಾಲವೈದ್ಯರು ಸಣ್ಣಪುಟ್ಟ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ಜತೆಗೆ ಇತರ ವಿದ್ಯಾರ್ಥಿಗಳು ಮಧ್ಯಾಹ್ನದ ಊಟದ ಮುನ್ನ ಸ್ವಚ್ಛವಾಗಿ ಕೈ ತೊಳೆದುಕೊಳ್ಳುವಂತೆ ಸೂಚಿಸುತ್ತಾರೆ. ಪ್ರತೀ ಬುಧವಾರ ಸಾಪ್ತಾಹಿಕ ಕಬ್ಬಿಣಾಂಶದ ಗುಳಿಗೆ ಹಾಗೂ ಫೋಲಿಕ್ ಆ್ಯಸಿಡ್ ಸಪ್ಲಿಮೆಂಟ್ ನೀಡಲಿದ್ದಾರೆ. ಸಹಪಾಠಿಗಳು ವ್ಯಸನಮುಕ್ತರಾಗುವಂತೆ ಮಾಡುವ ಜತೆಗೆ ಋತುಮಾನಕ್ಕೆ ಅನುಗುಣವಾದ ಕಾಯಿಲೆಗಳಿಗೆ ಮೂಲಭೂತ ಮಾಹಿತಿ ನೀಡುತ್ತಾರೆ" ಎಂದು ವಿವರಿಸಲಾಗಿದೆ.