ಮುಂಬೈನಾದ್ಯಂತ ಶಾಲೆ, ಕಾಲೇಜುಗಳು ಬಂದ್: ರಸ್ತೆ ತಡೆ ನಡೆಸಿದ ಪ್ರತಿಭಟನಕಾರರು
ಕೋರೆಗಾಂವ್ ಹಿಂಸಾಚಾರ

ಮುಂಬೈ,ಜ.2: ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಕೊರೆಗಾಂವ್ ಯುದ್ಧದ 200ನೇ ವರ್ಷಾಚರಣೆಯ ವೇಳೆ, ಭೀಮಾ ಕೋರೆಗಾಂವ್ ಹಾಗೂ ಆಸುಪಾಸಿನ ಹಳ್ಳಿಗಳಲ್ಲಿ ಸೋಮವಾರ ನಡೆದ ಹಿಂಸಾಚಾರದ ವಿರುದ್ಧ ದಲಿತರ ಪ್ರತಿಭಟನೆಯು ಮಂಗಳವಾರ ಮುಂಬೈ ಮಹಾನಗರ ಸೇರಿದಂತೆ ಮಹಾರಾಷ್ಟ್ರದ ವಿವಿಧ ನಗರಗಳಿಗೆ ಹರಡಿರುವುದಾಗಿ ವರದಿಯಾಗಿದೆ.
ಕೋರೆಗಾಂವ್ನಲ್ಲಿ ಸೋಮವಾರ ನಡೆದ ಹಿಂಸಾಚಾರದಲ್ಲಿ ಓರ್ವ ಮೃತಪಟ್ಟು, ಇತರ ಮೂವರು ಗಾಯಗೊಂಡಿದ್ದರು. ಸಾವಿರಾರು ದಲಿತರು ಕೊರೆಗಾಂವ್ ಯುದ್ಧ ಸ್ಮಾರಕದ ಬಳಿ ಸಭೆ ಸೇರಿದ್ದಾಗ, ಅಲ್ಲಿಗೆ ಆಗಮಿಸಿದ ಕೇಸರಿ ಧ್ವಜಗಳನ್ನು ಹಿಡಿದ ಕೆಲವು ವ್ಯಕ್ತಿಗಳು ಅಲ್ಲಿದ್ದ ವಾಹನಗಳಿಗೆ ಬೆಂಕಿ ಹಚ್ಚಿದರಲ್ಲದೆ, ಕಲ್ಲೆಸೆತದಲ್ಲಿ ತೊಡಗಿದ್ದರಿಂದ ಗಲಭೆ ಸ್ಫೋಟಿಸಿತ್ತು.
ಗಲಭೆಯಲ್ಲಿ 28 ವರ್ಷ ವಯಸ್ಸಿನ ರಾಹುಲ್ ಫತಂಗಲೆ ಎಂಬಾತ ಮೃತಪಟ್ಟಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಸಮೀಪದ ಗ್ರಾಮವಾದ ವಧು ಬಾಧ್ರಕ್ನಿಂದ ಬಂದಿದ್ದ ಕೆಲವರು, ಕೊರೆಗಾಂವ್ ಯುದ್ಧ ಸ್ಮಾರಕದ ಮುಂದೆ ಜಮಾಯಿಸಿದ್ದ ದಲಿತರ ಮೇಲೆ ಕಲ್ಲೆಸೆಯಲು ತೊಡಗಿದಾಗ ಹಿಂಸಾಚಾರ ಆರಂಭಗೊಂಡಿತ್ತು. ಆ ಬಳಿಕ ಆಸುಪಾಸಿನ ಗ್ರಾಮಗಳಾದ ಸನ್ಸಾವಾಡಿ,ಶಿಕ್ರಾಪುರ್ ಹಾಗೂ ಪೆರ್ನೆಗಳಲ್ಲಿಯೂ ಗಲಭೆ ಭುಗಿಲೆದ್ದಿತ್ತು.
ಡಿಸೆಂಬರ್ 30ರಂದು ವಧು ಬುದ್ರುಕ್ನಲ್ಲಿ ಕೆಲವು ಮೇಲ್ಜಾತಿಯ ಮರಾಠರು, ಮಹರ್ ಸಮುದಾಯದ ಐತಿಹಾಸಿಕ ಪುರುಷ ಗೋವಿಂದ ಗಣಪತಿ ಗಾಯಕ್ವಾಡ್ ಹಾಗೂ ಮರಾಠ ದೊರೆ ಮತ್ತು ಶಿವಾಜಿಯ ಪುತ್ರ ಸಾಂಬಾಜಿ ಮಹಾರಾಜ್ನ ಸಮಾಧಿಗಳಿಗೆ ಹಾನಿ ಮಾಡಿದ ಘಟನೆಯು ಸೋಮವಾರ ಘರ್ಷಣೆ ಭುಗಿಲೇಳಲು ಕಾರಣವಾಯಿತೆನ್ನಲಾಗಿದೆ.
ವಧು ಬುದ್ರುಕ್ ಹಿಂಸಾಚಾರಕ್ಕೆ ಸಂಬಂಧಿಸಿ ಪೊಲೀಸರು 49 ಮಂದಿಯ ವಿರುದ್ಧ ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಎಫ್ಐಆರ್ ದಾಖಲಿಸಿದ್ದರು. ಸೋಮವಾರ ಭಾರೀ ಹಿಂಸಾಚಾರಕ್ಕೆ ಸಾಕ್ಷಿಯಾದ ಭೀಮಾ ಕೋರೆಗಾಂವ್ನಿಂದ ವಧು ಬುದ್ರುಕ್ ಕೇವಲ ಮೂರು ಕಿ.ಮೀ. ದೂರದಲ್ಲಿದೆ.
ಸೋಮವಾರ ಕೋರೆಗಾಂವ್ ಯುದ್ಧ ಸ್ಮಾರಕಕ್ಕೆ ಗೌರವ ಸಲ್ಲಿಸಲು ಭೀಮಾ ಕೋರೆಗಾಂವ್ಗೆ ತೆರಳುತ್ತಿದ್ದ ನಿರಾಯುಧರಾದ ದಲಿತರ ಮೇಲೆ ಕೆಲವು ಮೇಲ್ಜಾತಿಯವರು ಕಲ್ಲೆಸೆದಿದ್ದರು. ಆನಂತರ ಗಲಭೆಕೋರರು ರಸ್ತೆಯಲ್ಲಿರುವ ವಾಹನಗಳಿಗೆ ಬೆಂಕಿ ಹಚ್ಚಿ, ಅಂಗಡಿಮುಂಗಟ್ಟೆಗಳನ್ನು ಬಲವಂತವಾಗಿ ಮುಚ್ಚಿಸಿದ್ದರು. ಘಟನೆಯ ಬಳಿಕ ಆ ಪ್ರದೇಶದಲ್ಲಿ ಕರ್ಫ್ಯೂ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿ ಶಿಕ್ರಾಪುರ್ನ ಪೊಲೀಸ್ ಇನ್ಸ್ಪೆಕ್ಟರ್ ರಮೇಶ್ ಗಾಲಂಡೆ ತಿಳಿಸಿದ್ದಾರೆ. ನಿನ್ನೆ ಸಂಜೆ ವೇಳೆಗೆೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿರುವುದಾಗಿ ಅವರು ತಿಳಿಸಿದ್ದಾರೆ. ಸ್ಥಳದಲ್ಲಿ ರಾಜ್ಯ ಮೀಸಲು ಪೊಲೀಸ್ ಪಡೆಯ ಎರಡು ತಂಡಗಳನ್ನು ನಿಯೋಜಿಸಲಾಗಿದೆ ಎಂದವರು ಹೇಳಿದ್ದಾರೆ.
ಕೇಸರಿ ಸಂಘಟನೆಗಳ ಬೆಂಬಲಿಗರಿಂದ ಕೋರೆಗಾಂವ್ನಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿ ಮುಂಬೈನಲ್ಲಿ ದಲಿತ ಹಕ್ಕುಗಳ ಗುಂಪೊಂದು ರಾಸ್ತಾ ರೋಕೊಗೆ ಕರೆ ನೀಡಿದೆ. ಮಂಗಳವಾರ ಮುಂಜಾನೆ ಭಾರೀ ಸಂಖ್ಯೆಯ ದಲಿತರು ದಿಯೋನಾರ್ ಹಾಗೂ ಚೆಂಬೂರ್ ಪ್ರದೇಶಗಳಲ್ಲಿ ಜಮಾಯಿಸಿ ರಸ್ತೆ ತಡೆ ನಡೆಸಿದರು.
ಕೋರೆಗಾಂವ್ ಗಲಭೆಗೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ದೃಢೀಕೃತವಲ್ಲದ ಮಾಹಿತಿಗಳನ್ನು ಪ್ರಸಾರ ಮಾಡದೆ ಹಾಗೂ ವದಂತಿಗಳನ್ನು ಹರಡದಂತೆ ಮುಂಬೈ ಪೊಲೀಸರು ನಾಗರಿಕರಿಗೆ ಮನವಿ ಮಾಡಿದ್ದಾರೆ.
► ಮೊಬೈಲ್ ನೆಟ್ವರ್ಕ್ ಸ್ಥಗಿತ
ಈ ಮಧ್ಯೆ ಪುಣೆಯ ಸ್ಥಾನಿಕ ಕಂದಾಯಧಿಕಾರಿ ರಾಜೇಂದ್ರ ಮುಠೆ ಭೀಮಾ ಕೋರೆಗಾಂವ್ ಹಾಗೂ ಆಸುಪಾಸಿನ ಗ್ರಾಮಗಳಲ್ಲಿ ಜನರು ಮಾರಕಾಸ್ತ್ರಗಳೊಂದಿಗೆ ಜಮಾಯಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ‘ಭೀಮಾ ಕೋರೆಗಾಂವ್ ಶೌರ್ಯಗಾಥಾ ದಿವಸ್’ ಅಂಗವಾಗಿ ಪುಣೆಯ ಹವೇಲಿ ಹಾಗೂ ಶಿರೂರ್ ತಹಶೀಲುಗಳಲ್ಲಿ ಆಯೋಜಿಸಲಾಗಿದ್ದ ಸಾಮಾಜಿಕ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ಮಂಗಳವಾರದವರೆಗೆ ಮೊಬೈಲ್ ನೆಟ್ವರ್ಕ್ಗಳನ್ನು ಕೂಡಾ ಕೋರೆಗಾಂವ್ ಹಾಗೂ ಆಸುಪಾಸಿನ ಪ್ರದೇಶಗಳಲ್ಲಿ ಸ್ಥಗಿತಗೊಳಿಸಲಾಗಿದೆ.
► ಔರಂಗಾಬಾದ್ನಲ್ಲಿ ಕಲ್ಲೆಸೆತ
ಕೋರೆಗಾಂವ್ ಹಿಂಸಾಚಾರದ ಬೆನ್ನಲ್ಲೇ ಔರಂಗಾಬಾದ್ ನಗರ ಹಾಗೂ ಆಸುಪಾಸಿನ ಗ್ರಾಮಾಂತರ ಪ್ರದೇಶಗಳಲ್ಲಿ ಸೋಮವಾರ ಕಲ್ಲೆಸೆತದ ಘಟನೆಗಳು ವರದಿಯಾಗಿವೆ. ಬೌದ್ಧಧರ್ಮದ ಪಂಚಶೀಲ ಧ್ವಜ ಹಾಗೂ ಅಂಬೇಡ್ಕರ್ ಮತ್ತು ಬುದ್ಧನ ಚಿತ್ರವಿರುವ ಹಲವಾರು ವಾಹನಗಳ ಮೇಲೂ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಪರಿಸ್ಥಿತಿಯೀಗ ನಿಯಂತ್ರಣದಲ್ಲಿದೆಯೆಂದು ಔರಂಗಾಬಾದ್ ಪೊಲೀಸರು ತಿಳಿಸಿದ್ದಾರೆ.
► ಸಾಕಷ್ಟು ಸಂಖ್ಯೆಯ ಪೊಲೀಸರಿರಲಿಲ್ಲ
ಗಲಭೆ ಭುಗಿಲೆದ್ದ ಸಂದರ್ಭದಲ್ಲಿ ಸ್ಥಳದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರಿರಲಿಲ್ಲ. ಅಗ್ನಿಶಾಮಕದಳ ವಾಹನಗಳು ಅಥವಾ ಆ್ಯಂಬುಲೆನ್ಸ್ಗಳಾಗಲಿ ಸ್ಥಳದಲ್ಲಿರಲಿಲ್ಲ. ಪೊಲೀಸರು ಮಧ್ಯಾಹ್ನದ ಹೊತ್ತಿಗಷ್ಟೇ ಅಗ್ನಿಶಾಮಕ ವಾಹನಗಳೊಂದಿಗೆ ಆಗಮಿಸಿದ್ದಾಗಿ, ಹಿಂಸಾಚಾರದ ವೇಳೆ ಭೀಮಾ ಕೋರೆಗಾಂವ್ನಲ್ಲಿದ್ದ ಕಬೀರ್ ಕಲಾ ಮಂಚ್ ಸಂಘಟನೆಯ ಕಾರ್ಯಕರ್ತ ಶೀಥಲ್ ಸಾಠೆ ತಿಳಿಸಿದ್ದಾರೆ.
ಭೀಮಾ ಕೋರೆಗಾಂವ್ನಲ್ಲಿ ಮೊದಲಿಗೆ ಕೇಸರಿ ಧ್ವಜಗಳನ್ನು ಹಿಡಿದ ಕೆಲವು ವ್ಯಕ್ತಿಗಳು ರಸ್ತೆಯಲ್ಲಿ ನಿಂತಿದ್ದ ಕೆಲವು ಮಹಿಳೆಯರನ್ನು ಚುಡಾಯಿಸತೊಡಗಿದರು. ಆನಂತರ ಅವರು ಕಲ್ಲೆಸೆತದಲ್ಲಿ ತೊಡಗಿದರು ಹಾಗೂ ಘೋಷಣೆಗಳನ್ನು ಕೂಗಿದರು. ‘ಜೈ ಭೀಮ್’ ಅಥವಾ ‘ಭೀಮಾ ಕೋರೆಗಾಂವ್ ಶೌರ್ಯ ಗಾಥಾ ದಿವಸ್’ನ ಸ್ಟಿಕರ್ಗಳನ್ನು ಅಂಟಿಸಿದ್ದ ವಾಹನಗಳಿಗೆ ಹಾನಿಯುಂಟು ಮಾಡಿದರು. ಸ್ಮಾರಕದ ಬಳಿ ಲಕ್ಷಾಂತರ ಜನರು ಜಮಾಯಿಸಿದ್ದರೂ, ಸಾಕಷ್ಟು ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿರಲಿಲ್ಲ.
ನಿತಿನ್ ದಿವೇಕರ್ ಪ್ರತ್ಯಕ್ಷದರ್ಶಿ, ಐಟಿ ಉದ್ಯೋಗಿ
► ಕೋರೆಗಾಂವ್ ಗಲಭೆ: ಮುಂಬೈನ ವಿವಿಧೆಡೆ ಭಾರೀ ಪ್ರತಿಭಟನೆ
ಕೊರೆಗಾಂವ್ ಹಿಂಸಾಚಾರವನ್ನು ಖಂಡಿಸಿ ಉದ್ರಿಕ್ತ ಪ್ರತಿಭಟನಕಾರರು ಉಪನಗರ ಹಾಗೂ ನಗರಗಳ ರೈಲು ಸಂಚಾರಕ್ಕೆ ತಡೆಯೊಡ್ಡಿದ್ದಾರೆ.
ಮುಂಬೈನ ಹಲವು ಪ್ರದೇಶಗಳಲ್ಲಿ ಪ್ರತಿಭಟನಕಾರರು ರಸ್ತೆಗಳಿಗೆ ತಡೆಯೊಡ್ಡಿದರು, ಅಂಗಡಿಗಳನ್ನು ಮುಚ್ಚುಗಡೆಗೊಳಿಸಿದರು ಹಾಗೂ ಸುದ್ದಿವಾಹಿನಿಯೊಂದರ ವರದಿಗಾರನ ಮೇಲೆ ದಾಳಿ ನಡೆಸಿರುವುದಾಗಿ ವರದಿಯಾಗಿದೆ.
ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕೇಂದ್ರೀಯ ರೈಲ್ವೆಯು ಬಂದರು ಕಾರಿಡಾರ್ನಲ್ಲಿರುವ ಕುರ್ಲಾ ಹಾಗೂ ವಾಶಿ ನಡುವಿನ ರೈಲ್ವೆ ಸಂಚಾರವನ್ನು ಮತ್ತು ಸಿಎಸ್ಎಂಟಿ-ಕುರ್ಲಾ ಮತ್ತು ವಾಶಿ-ಪನ್ವೇಲ್ ವಿಭಾಗದ ವಿಶೇಷ ರೈಲು ಸಂಚಾರವನ್ನು ರದ್ದುಪಡಿಸಿದೆ.
ಭೀಮಾಕೋರೆಗಾಂವ್ ಯುದ್ಧದ 200ನೇ ವರ್ಷಾಚರಣೆಯ ವೇಳೆ ನಡೆದ ಘರ್ಷಣೆ ಯಲ್ಲಿ ಓರ್ವಅಮಾಯಕ ವ್ಯಕ್ತಿ ಬಲಿಯಾದ ಘಟನೆಯನ್ನು ಖಂಡಿಸಿ ಹಲ ವಾರು ದಲಿತ ಸಂಘಟನೆಗಳು ಮಂಗಳವಾರ ಮುಂಬೈ ಮಹಾನಗರದ ಚೆಂಬೂರು, ವಿಖ್ರೋಲಿ, ಮಾಂಕುರ್ಡ್ ಹಾಗೂ ಗೋವಂಡಿಗಳಲ್ಲಿ ಪ್ರತಿಭಟನೆ ನಡೆಸಿದರು. ಉದ್ರಿಕ್ತ ಗುಂಪುಗಳು ಅಂಗಡಿಮುಂಗಟ್ಟೆಗಳನ್ನು ಬಲವಂತವಾಗಿ ಮುಚ್ಚಿಸಿದರೆಂದು ವರದಿಗಳು ತಿಳಿಸಿವೆ.
ಮುಂಬೈನ ಪ್ರಿಯದರ್ಶಿನಿ, ಕುರ್ಲಾ, ಸಿದ್ಧಾರ್ಥ ಕಾಲನಿ ಹಾಗೂ ಅಮರ್ ಮಹಲ್ ಪ್ರದೇಶಗಳಲ್ಲಿ ಪ್ರತಿಭಟನಕಾರರು ಜಾಥಾಗಳನ್ನು ನಡೆಸಿದರು ಹಾಗೂ ಮಹಾರಾಷ್ಟ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ರಮಾಬಾಯಿ ಅಂಬೇಡ್ಕರ್ ನಗರದಲ್ಲಿ ಬಸ್ಸೊಂದರ ಮೇಲೆ ಕಲ್ಲೆಸೆತ ನಡೆದ ಬಗ್ಗೆ ವರದಿಯಾಗಿದೆ. ಮುಂಬೈನ ಪೂರ್ವ ಉಪನಗರ ಪ್ರದೇಶಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗರೂಕತಾ ಕ್ರಮವಾಗಿ ಭಾರೀ ಸಂಖ್ಯೆಯಲ್ಲಿ ಭದ್ರತಾಪಡೆಗಳನ್ನು ನಿಯೋಜಿಸಲಾಗಿದೆ.
ಭೀಮಾ-ಕೋರೆಗಾಂವ್ ಸಮರದಲ್ಲಿ ಮರಾಠ ಬ್ರಾಹ್ಮಣ ಪೇಶ್ವೆಗಳ ಸೇನೆಯನ್ನು, ಈಸ್ಟ್ ಇಂಡಿಯಾ ಕಂಪೆನಿಯ ದಲಿತ ಮಹರ್ಪಂಗಡ ಸೈನಿಕರು ಪರಾಭವಗೊಳಿಸಿದ ಘಟನೆಯ 200ನೇ ವರ್ಷಾಚರಣೆಯ ಪ್ರಯುಕ್ತ ಸೋಮವಾರ ಕೋರೆಗಾಂವ್ನಲ್ಲಿ ದಲಿತ ಸಂಘಟನೆಗಳು ಕಾರ್ಯಕ್ರಮವನ್ನು ಆಯೋಜಿಸಿದ್ದವು ಆದರೆ ಕೆಲವು ಕೇಸರಿ ಸಂಘಟನೆಗಳು ಇದನ್ನು ತೀವ್ರವಾಗಿ ವಿರೋಧಿಸಿದ್ದವು.