ಮದ್ರಸಗಳ ರಜೆ ಕಡಿತಗೊಳಿಸಿದ ಉತ್ತರ ಪ್ರದೇಶ ಸರಕಾರ

ಲಕ್ನೋ, ಜ.3: ಮದ್ರಸಗಳು ಸ್ವಾತಂತ್ರ್ಯ ದಿನಗಳಂದು ಕಡ್ಡಾಯವಾಗಿ ರಾಷ್ಟ್ರಗೀತೆ ಹಾಡಿ ಅದರ ವೀಡಿಯೋ ದಾಖಲೆ ಹೊಂದಬೇಕೆಂದು ಈ ಹಿಂದೆ ಆದೇಶಿಸಿದ್ದ ಉತ್ತರ ಪ್ರದೇಶ ಸರಕಾರ ಇದೀಗ ತನ್ನ ವಾರ್ಷಿಕ ರಜಾ ಕ್ಯಾಲೆಂಡರ್ ಹೊರತಂದಿದ್ದು, ಅದರಲ್ಲಿ ಮುಸ್ಲಿಂ ಹಬ್ಬಗಳಿಗೆ ಸಂಬಂಧಿಸಿದ ವಿವೇಚನಾ ರಜೆಗನ್ನು ಕಡಿಮೆಗೊಳಿಸಲಾಗಿದೆ. ಅಲ್ಲದೆ ಇತರ ಧರ್ಮಗಳ ಹಬ್ಬಗಳಂದು ಮದ್ರಸಗಳು ಕಡ್ಡಾಯವಾಗಿ ಮುಚ್ಚಬೇಕೆಂದೂ ಹೇಳಲಾಗಿದೆ.
ವಾರ್ಷಿಕ ರಜಾ ಕ್ಯಾಲೆಂಡರಿನಲ್ಲಿ ಏಳು ಹೊಸ ರಜೆಗಳನ್ನು ಸೇರಿಸಲಾಗಿದೆ. ಈ ಹಿಂದೆ ಮುಸ್ಲಿಮ್ ಹಬ್ಬಗಳಿಗೆ 10 ವಿವೇಚನಾ ರಜೆಗಳಿದ್ದರೂ ಅವುಗಳನ್ನು ಈಗ ನಾಲ್ಕಕ್ಕೆ ಇಳಿಸಲಾಗಿದೆ. ಮೇಲಾಗಿ ಈ ರಜೆಗಳನ್ನು ಒಟ್ಟಾಗಿ ತೆಗೆದುಕೊಳ್ಳುವ ಹಾಗಿಲ್ಲ.
ಸರಕಾರದ ಈ ಕ್ರಮಕ್ಕೆ ಮುಸ್ಲಿಂ ಧರ್ಮಗುರುಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಲ್ಲಿಯ ತನಕ ಉತ್ತರ ಪ್ರದೇಶದ ಮದ್ರಸಗಳು ಹೋಳಿ ಮತ್ತು ಅಂಬೇಡ್ಕರ್ ಜಯಂತಿ ಹೊರತುಪಡಿಸಿ ಕೇವಲ ಮುಸ್ಲಿಂ ಹಬ್ಬಗಳಂದು ಮಾತ್ರ ಮುಚ್ಚಲ್ಪಡುತ್ತಿದ್ದವು. ಆದರೆ ಈ ಹೊಸ ಕ್ಯಾಲೆಂಡರ್ ಅನ್ವಯ ಮಹಾವೀರ ಜಯಂತಿ, ಬುದ್ಧ ಪೂರ್ಣಿಮ, ರಕ್ಷಾ ಬಂಧನ್, ಮಹಾನವಮಿ, ದೀಪಾವಳಿ, ದಸರಾ ಮತ್ತು ಕ್ರಿಸ್ಮಸ್ ಸಂದರ್ಭ ಕೂಡ ಮದ್ರಸಗಳಿಗೆ ರಜೆ ನೀಡಬೇಕಾಗಿದೆ.
‘‘ಮದ್ರಸಗಳು ಧಾರ್ಮಿಕ ಅಲ್ಪಸಂಖ್ಯಾತರ ಸಂಸ್ಥೆಯಾಗಿರುವುದರಿಂದ ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಕಾರ್ಯಕ್ರಮಗಳ ಸಂದರ್ಭ ಅವರಿಗೆ ವಿವೇಚನಾ ರಜೆ ಉಪಯೋಗಿಸಲು ಇನ್ನು ಸಾಧ್ಯವಿಲ್ಲ. ಇತರ ಧರ್ಮಗಳಿಗೆ ಸಂಬಂಧಿಸಿದ ರಜೆಗಳ ಹೆಚ್ಚಳದಿಂದ ಸಮಸ್ಯೆಯಿಲ್ಲ, ಆದರೆ ನಮಗೆ ನೀಡಲಾಗಿದ್ದ ಹತ್ತು ವಿಶೇಷ ವಿವೇಚನಾ ರಜೆಗಳನ್ನು ಕಡಿತಗೊಳಿಸಿರುವುದು ಸರಿಯಲ್ಲ’’ ಎಂದು ಇಸ್ಲಾಮಿಕ್ ಮದ್ರಸ ಟೀಚರ್ಸ್ ಅಸೋಸಿಯೇಶನ್ ಅಧ್ಯಕ್ಷ ಇಜಾರ್ ಅಹ್ಮದ್ ಹೇಳಿದ್ದಾರೆ.