‘ಕೋರೆಗಾಂವ್ ಹಿಂಸಾಚಾರದಲ್ಲಿ ಆರ್ಎಸ್ಎಸ್ ಕೈವಾಡ’
ಲೋಕಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಆರೋಪ

ಹೊಸದಿಲ್ಲಿ, ಜ.3: ಪುಣೆ ಭೀಮಾ ಕೋರೆಗಾಂವ್ನಲ್ಲಿ ದಲಿತರ ರ್ಯಾಲಿ ಮೇಲೆ ಕಲ್ಲು ತೂರಾಟ ನಡೆಸಿ ಹಿಂಸಾಚಾರ ಭುಗಿಲೇಳಲು ಆರ್ಎಸ್ಎಸ್ ಕೈವಾಡವಿದೆ ಎಂದು ಗಂಭೀರ ಆರೋಪ ಮಾಡಿರುವ ಲೋಕಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಈ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸದನದಲ್ಲಿ ಹೇಳಿಕೆ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ.
‘‘ದೇಶದಲ್ಲಿ ದಲಿತರು ನಿರಂತರವಾಗಿ ದಾಳಿಗೆ ಒಳಗಾಗುತ್ತಿದ್ದಾರೆ. ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಇದು ಹೆಚ್ಚಾಗಿದೆ. ಪುಣೆ ಹಿಂಸಾಚಾರದ ಹಿಂದೆ ಆರ್ಎಸ್ಎಸ್ನ ನೇರ ಕೈವಾಡ ಸ್ಪಷ್ಟವಾಗಿದೆ. ಹಿಂಸಾಚಾರಕ್ಕೆ ಮಹಾರಾಷ್ಟ್ರ ಸರಕಾರ ನೇರ ಹೊಣೆ. ಹಿಂಸಾಚಾರ ಘಟನೆಯನ್ನು ಸುಪ್ರೀಂಕೋರ್ಟ್ ನ್ಯಾಯಾಧೀಶರು ತನಿಖೆ ನಡೆಸಬೇಕು’’ ಎಂದು ಖರ್ಗೆ ಲೋಕಸಭೆಯಲ್ಲಿ ಹೇಳಿದರು.
ಇದಕ್ಕೆ ಉತ್ತರಿಸಿದ ಸಂಸದೀಯ ವ್ಯವಹಾರ ಸಚಿವ ಅನಂತ್ಕುಮಾರ್,‘‘ಪುಣೆ ಹಿಂಸಾಚಾರ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ’’ ಎಂದು ಹೇಳಿದರು.
ಅನಂತಕುಮಾರ್ ಹೇಳಿಕೆಯ ಬಳಿಕ ಸದನದಲ್ಲಿ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆಯಿತು.
ಪುಣೆ ಜಿಲ್ಲೆಯ ಕೋರೆಗಾಂವ್ನಲ್ಲಿ ದಲಿತರ ಮೇಲಿನ ಹಿಂಸಾಚಾರವನ್ನು ಖಂಡಿಸಿ ಇಂದು ಮಹಾರಾಷ್ಟ್ರ ಬಂದ್ಗೆ ಕರೆ ನೀಡಲಾಗಿದ್ದು, ರಸ್ತೆ, ರೈಲ್ವೆ ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಅಲ್ಲಲ್ಲಿ ರಸ್ತೆ ತಡೆ, ರೈಲನ್ನು ತಡೆದ ಘಟನೆ ನಡೆದಿದೆ.
ದಲಿತರಿಗೆ ಸಂಬಂಧಿಸಿದ ವಿಷಯಗಳಲ್ಲಿ ಪ್ರಧಾನಿ ಯಾವಾಗಲೂ ಮೌನವಾಗಿರುತ್ತಾರೆ . ದಲಿತ ವಿಷಯಗಳಲ್ಲಿ ಅವರು ‘ಮೌನಿ ಬಾಬಾ’ ಆಗಿದ್ದಾರೆ ಎಂದ ಖರ್ಗೆ, ಗುಜರಾತ್ ಮತ್ತು ಮಹಾರಾಷ್ಟ್ರ ಸೇರಿದಂತೆ ಬಿಜೆಪಿ ಆಡಳಿತವಿರುವ ಹಲವಾರು ರಾಜ್ಯಗಳು ದಲಿತರ ವಿರುದ್ಧ ಇದೇ ರೀತಿಯ ಹಿಂಸಾಚಾರಗಳಿಗೆ ಸಾಕ್ಷಿಯಾಗಿವೆ ಎಂದರು.
ಖರ್ಗೆಯವರ ಹೇಳಿಕೆಗಳಿಗೆ ಬಿಜೆಪಿ ಸದಸ್ಯರಿಂದ ತೀವ್ರ ಪ್ರತಿಭಟನೆಗಳು ವ್ಯಕ್ತವಾದವು. ಅವರ ಆರೋಪಗಳನ್ನು ತಿರಸ್ಕರಿಸಿದ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ಅವರು, ಕಾಂಗ್ರೆಸ್ ಈ ವಿಷಯದಲ್ಲಿ ರಾಜಕೀಯ ಲಾಭಕ್ಕಾಗಿ ಪ್ರಯತ್ನಿಸುತ್ತಿದೆ ಎಂದು ಆಪಾದಿಸಿದರು.
ಇದರಿಂದ ಕೆರಳಿದ ಕಾಂಗ್ರೆಸ್ ಸದಸ್ಯರು ಸದನದ ಅಂಗಳಕ್ಕೆ ಧಾವಿಸಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನವನ್ನು ನಿಲ್ಲಿಸಿ, ದೇಶವನ್ನು ವಿಭಜಿಸುವುದನ್ನು ನಿಲ್ಲಿಸಿ ಮತ್ತು ಪ್ರಧಾನಿಗಳೇ,ಮಾತನಾಡಿ ಎಂಬ ಘೋಷಣೆಗಳನ್ನು ಕೂಗಿದರು.
ದಲಿತರು ಸಮಾಜದ ಕೆಳಸ್ತರದಲ್ಲಿಯೇ ಉಳಿಯಬೇಕೆಂದು ಕೆಲವು ಫ್ಯಾಶಿಸ್ಟ್ ಶಕ್ತಿಗಳು ಸದಾ ಬಯಸುತ್ತಿವೆ ಎಂದೂ ಖರ್ಗೆ ಆರೋಪಿಸಿದರು.