ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿ ಪ್ರಕಟಿಸಿದ ಆಪ್: ಕುಮಾರ್ ವಿಶ್ವಾಸ್ ಕಡೆಗಣನೆ

ಹೊಸದಿಲ್ಲಿ, ಜ.3: ಆಮ್ ಆದ್ಮಿ ಪಕ್ಷ ಜ.16 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಮೂವರು ಅಭ್ಯರ್ಥಿಗಳನ್ನು ಬುಧವಾರ ನಾಮನಿರ್ದೇಶನ ಮಾಡಿದ್ದು, ರಾಜ್ಯಸಭಾ ಸೀಟಿನ ಮೇಲೆ ಕಣ್ಣಿಟ್ಟಿದ್ದ ಪಕ್ಷದ ಸಂಸ್ಥಾಪಕ ಸದಸ್ಯ ಕುಮಾರ್ ವಿಶ್ವಾಸ್ರನ್ನು ಕಡೆಗಣಿಸಲಾಗಿದೆ.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿವಾಸದಲ್ಲಿ ನಡೆದ ಪಕ್ಷದ ರಾಜಕೀಯ ವ್ಯವಹಾರ ಸಮಿತಿ ಸಭೆಯ ಬಳಿಕ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ರಾಜ್ಯಸಭಾ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿದರು.
ಖ್ಯಾತ ಲೆಕ್ಕ ಪರಿಶೋಧಕ ಹಾಗೂ ಭಾರತದ ಲೆಕ್ಕ ಪರಿಶೋಧಕರ ಸಂಸ್ಥೆಯ ಮಾಜಿ ಅಧ್ಯಕ್ಷ ಎನ್.ಡಿ. ಗುಪ್ತಾ, ಕೋಟ್ಯಧಿಪತಿ ಉದ್ಯಮಿ ಹಾಗೂ ಸಮಾಜ ಸೇವಕ ಸುಶೀಲ್ ಗುಪ್ತಾ ಹಾಗೂ ಪಕ್ಷದ ಕಾರ್ಯಕಾರಿ ಸದಸ್ಯ ಸಂಜಯ್ ಸಿಂಗ್ರನ್ನು ರಾಜ್ಯಸಭಾ ಸದಸ್ಯತ್ವಕ್ಕೆ ನಾಮ ನಿರ್ದೇಶನ ಮಾಡಲಾಗಿದೆ.
ಮೂವರು ರಾಜ್ಯಸಭಾ ಅಭ್ಯರ್ಥಿಗಳ ಪಟ್ಟಿಯಲ್ಲಿ ತನ್ನ ಹೆಸರು ಇಲ್ಲದಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿರುವ ಕುಮಾರ್ ವಿಶ್ವಾಸ್,‘‘ನಾನು ಸತ್ಯ ಹೇಳಿದ್ದಕ್ಕೆ ಶಿಕ್ಷೆ ನೀಡಲಾಗಿದೆ’’ ಎಂದು ಹೇಳಿದ್ದಾರೆ.
ಎಎಪಿಯ ಹಲವು ಕಾರ್ಯಕಾರಿಣಿ ಸದಸ್ಯರು ಮೇಲ್ಮನೆಗೆ ಪ್ರವೇಶ ಪಡೆಯುವ ವಿಶ್ವಾಸದಲ್ಲಿದ್ದರು. ಇದೀಗ ಪಕ್ಷ ಪ್ರಕಟಿಸಿರುವ ಮೂವರು ಹೆಸರಲ್ಲಿ ಇಬ್ಬರು ಅಚ್ಚರಿ ಆಯ್ಕೆಯಾಗಿದ್ದಾರೆ