ವರ್ಷದಿಂದ ವೇತನವಿಲ್ಲದೇ ಕುವೈತ್ ನಲ್ಲಿ 4,000 ಭಾರತೀಯರು ಅತಂತ್ರ

ಹೊಸದಿಲ್ಲಿ: ಕುವೈತ್ ನ ನಿರ್ಮಾಣ ಕಂಪನಿಯೊಂದು, ಸಿಬ್ಬಂದಿಗೆ ಒಂದು ವರ್ಷದಿಂದ ವೇತನ ಪಾವತಿ ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನಾಲ್ಕು ಸಾವಿರ ಮಂದಿಯ ಭವಿಷ್ಯ ಅತಂತ್ರವಾಗಿದೆ. ಅತಂತ್ರ ಸ್ಥಿತಿಯಲ್ಲಿರುವ ಈ ಕಾರ್ಮಿಕರ ಕುಟುಂಬಕ್ಕೆ ತಕ್ಷಣ ನೆರವು ನಿಡುವ ಸಲುವಾಗಿ ಕುವೈತ್ ನಲ್ಲಿರುವ ಭಾರತೀಯ ದೂತಾವಾಸ ತಕ್ಷನ ನಿಧಿ ಸ್ಥಾಪಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಶಹೀನ್ ಸೈಯದ್ ಆಗ್ರಹಿಸಿದ್ದಾರೆ. ಇದರೊಂದಿಗೆ ಇವರ ವೀಸಾ ಅವಧಿ ಕೂಡ ಮುಗಿದಿದ್ದು, ಕಂಪನಿ ಇವರ ಪಾಸ್ಪೋರ್ಟ್ಗಳನ್ನು ಹಿಡಿದಿಟ್ಟುಕೊಂಡಿದೆ ಎಂದು ಅವರು ಆಪಾದಿಸಿದ್ದಾರೆ.
"ಹಲವು ಮಂದಿಗೆ ಆರೋಗ್ಯ ಸಮಸ್ಯೆಗಳಿದ್ದು, ಹಣಕಾಸು ತೊಂದರೆ ಹಾಗೂ ವೀಸಾ ಸಮಸ್ಯೆಯಿಂದಾಗಿ ಚಿಕಿತ್ಸೆ ಪಡೆಯುವುದು ಕೂಡಾ ಸಾಧ್ಯವಾಗುತ್ತಿಲ್ಲ. ಕುವೈತ್ ಸರ್ಕಾರಕ್ಕೆ ಈ ಸಮಸ್ಯೆಯ ಅರಿವು ಇದ್ದು, ಕಾರ್ಮಿಕರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಭಾರತ ದೂತಾವಾಸಕ್ಕೂ ಸಮಸ್ಯೆಯ ಅರಿವು ಇದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಭಾರತ ಸರ್ಕಾರಕ್ಕೆ ಈ ಸಮಸ್ಯೆಯ ತೀವ್ರತೆಯನ್ನು ತಿಳಿಸಿಕೊಡುವ ಪ್ರಯತ್ನದಲ್ಲಿದ್ದೇವೆ" ಎಂದು ಸೈಯದ್ ವಿವರಿಸಿದ್ದಾರೆ.
ಪ್ರಸ್ತುತ ಕಂಪೆನಿಯಿಂದ ನಗರದ ಹೊರವಲಯದ ಶಿಬಿರಕ್ಕೆ ಸ್ಥಳಾಂತರಗೊಂಡ ಈ ಸಿಬ್ಬಂದಿ, ಕಂಪೆನಿಯ ಕೇಂದ್ರ ಕಚೇರಿಯ ಮುಂದೆ ನಡೆಸಿದ ಪ್ರತಿಭಟನೆ ಕೂಡಾ ಯಾವುದೇ ಫಲ ನೀಡಿಲ್ಲ. ನಿರ್ಮಾಣ ಯೋಜನೆಗಳ ಸಂಖ್ಯೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕಾರ್ಮಿಕರಿಗೆ ವೇತನ ಪಾವತಿಸಲು ಹಣ ಇಲ್ಲ ಎಂದು ಕಂಪೆನಿ ಹೇಳಿಕೊಂಡಿದೆ.