ತ್ರಿವಳಿ ತಲಾಖ್ ಮಸೂದೆ ಮುಸ್ಲಿಂ ಮಹಿಳೆಯರಿಗೆ ರಕ್ಷಣೆ ನೀಡದು: ಮಮತಾ

ಕೊಲ್ಕತ್ತಾ, ಜ.4: ತ್ರಿವಳಿ ತಲಾಖ್ ಪದ್ಧತಿಯನ್ನು ಅಪರಾಧವೆಂದು ಪರಿಗಣಿಸುವ ಮಸೂದೆಯನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದ್ದು, ಈ ಮಸೂದೆ ಮುಸ್ಲಿಂ ಮಹಿಳೆಯರಿಗೆ ರಕ್ಷಣೆ ಒದಗಿಸುವ ಉದ್ದೇಶ ಹೊಂದಿಲ್ಲ, ಬದಲಾಗಿ ಮುಸ್ಲಿಂ ಸಮುದಾಯವನ್ನು ಕೇವಲ ‘ಚುಚ್ಚುವುದು’ ಎಂದಿದ್ದಾರೆ.
ಈ ಮಸೂದೆ ಅನಗತ್ಯ ತೊಂದರೆ ಸೃಷ್ಟಿಸಲಿದೆ. ಬಿಜೆಪಿ ಈ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದೆ ಎಂದು ಬಿರ್ಭುಂ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯೊಂದನ್ನುದ್ದೇಶಿಸಿ ಮಾತನಾಡಿದ ಬ್ಯಾನರ್ಜಿ ಹೇಳಿದರು.
ಕಳೆದ ವರ್ಷದ ಆಗಸ್ಟ್ 22ರಂದು ತ್ರಿವಳಿ ತಲಾಖ್ ಪದ್ಧತಿಯನ್ನು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಘೋಷಿಸಿದ ನಂತರ ಮಮತಾ ಬ್ಯಾನರ್ಜಿ ಆ ವಿಚಾರದ ಬಗ್ಗೆ ಬಹಿರಂಗ ಹೇಳಿಕೆ ನೀಡಿರುವುದು ಇದೇ ಮೊದಲಾಗಿದೆ.
ಮಮತಾ ಅವರ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಮರ ಬೆಂಬಲ ಸಾಕಷ್ಟಿರುವುದರಿಂದ ಹಾಗೂ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ 27.01ರಷ್ಟು ಮಂದಿ ಮುಸ್ಲಿಮರಾಗಿರುವುದರಿಂದ ತ್ರಿವಳಿ ತಲಾಖ್ ವಿಚಾರ ಅವರ ಸರಕಾರಕ್ಕೆ ಮಹತ್ವದ್ದಾಗಿದೆ. ಅವರ ಪಕ್ಷ ಮುಸ್ಲಿಮರನ್ನು ಮತ ಬ್ಯಾಂಕ್ ಆಗಿ ಪರಿಗಣಿಸುತ್ತಿರುವುದರಿಂದ ಅವರ ಓಲೈಕೆಯಲ್ಲಿ ತೊಡಗಿದೆ ಎಂಬ ಆರೋಪ ಕೂಡ ಆಗಾಗ ಕೇಳಿ ಬರುತ್ತಿದೆ.
ಆದರೆ ತ್ರಿವಳಿ ತಲಾಖ್ ಬಗ್ಗೆ ಮಮತಾ ಹೇಳಿಕೆ ಬಿಜೆಪಿಯಿಂದ ತೀಕ್ಷ್ಣ ಪ್ರತಿಕ್ರಿಯೆಗೆ ಕಾರಣವಾಗಿದೆ. ‘ಅವರು ರಾಜಕೀಯ ಅವಕಾಶವಾದಿಯಾಗಲು ಯತ್ನಿಸುತ್ತಿದ್ದಾರೆ. ಮಹಿಳೆಯಾಗಿದ್ದ ಹೊರತಾಗಿಯೂ ಮುಸ್ಲಿಂ ಮಹಿಳೆಯರ ನೋವು ಅವರಿಗೆ ಅರ್ಥವಾಗುತ್ತಿಲ್ಲ’’ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಹುಲ್ ಸಿನ್ಹಾ ಹೇಳಿದ್ದಾರೆ.
ಸಿಪಿಎಂ ಪಾಲಿಟ್ ಬ್ಯುರೋ ಸದಸ್ಯ ಹಾಗೂ ಸಂಸದ ಮುಹಮ್ಮದ್ ಸಲೀಂ ಕೂಡ ಮಮತಾ ನಿಲುವನ್ನು ಟೀಕಿಸಿದ್ದಾರೆ.