ಜಿಗ್ನೇಶ್ ಮೆವಾನಿ, ಖಾಲಿದ್ ಕಾರ್ಯಕ್ರಮಕ್ಕೆ ಮುಂಬೈ ಪೊಲೀಸರಿಂದ ಅನುಮತಿ ನಿರಾಕರಣೆ

ಮುಂಬೈ, ಜ.4: ದಲಿತ ನಾಯಕ ಜಿಗ್ನೇಶ್ ಮೆವಾನಿ ಹಾಗೂ ದಿಲ್ಲಿ ಜವಾಹರ್ಲಾಲ್ ನೆಹರೂ ವಿಶ್ವವಿದ್ಯಾಲಯದ(ಜೆಎನ್ಯು) ವಿದ್ಯಾರ್ಥಿ ಮುಖಂಡ ಉಮರ್ ಖಾಲಿದ್ ಪಾಲ್ಗೊಳ್ಳಲಿರುವ ಕಾರ್ಯಕ್ರಮಕ್ಕೆ ಮುಂಬೈ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.
ಕಾರ್ಯಕ್ರಮಕ್ಕೆ ಅನುಮತಿ ನಿರಾಕರಣೆಯ ಹಿನ್ನೆಲೆಯಲ್ಲಿ ಮುಂಬೈನ ವಿಲೇಪಾರ್ಲೆ ಪರಿಸರದಲ್ಲಿ ದಲಿತ ಸಂಘಟನೆಗಳು ಭಾರೀ ಪ್ರತಿಭಟನೆ ನಡೆಸಿವೆ.
ಮುಂಬೈನಲ್ಲಿ ಪೊಲೀಸರು ಕಾನೂನು ಸುವವ್ಯವಸ್ಥೆ ಕಾಪಾಡಲು ಕೆಲವು ವಿದ್ಯಾರ್ಥಿಗಳು ಹಾಗೂ ಕಾರ್ಯಕ್ರಮ ಆಯೋಜಕರನ್ನು ಬಂಧಿಸಿದ್ದಾರೆ. ಕಳೆದ ಎರಡು, ಮೂರು ದಿನಗಳಿಂದ ದಲಿತ ಸಂಘಟನೆಗಳ ಪ್ರತಿಭಟನೆ ಹಿಂಸಾರೂಪ ಪಡೆದಿರುವ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಜಿಲ್ಲಾಡಳಿತ ಸೆಕ್ಷನ್ 149ನ್ನು ವಿಧಿಸಿದೆ.
ನಗರದ ಭಾಯಿದಾಸ್ ಹಾಲ್ ಬಳಿ ಭಾರೀ ಸಂಖ್ಯೆಯಲ್ಲಿ ಪೊಲೀಸರು ಜಮಾಯಿಸಿ ಪ್ರತಿಭಟನೆ ನಿರತ ವಿದ್ಯಾರ್ಥಿಗಳನ್ನು ಬಂಧಿಸಿ ಜುಹು ಪೊಲೀಸ್ ಸ್ಟೇಶನ್ಗೆ ಕೊಂಡೊಯ್ದಿದ್ದಾರೆ. ‘‘ಉಮರ್ ಖಾಲಿದ್ ಹಾಗೂ ಜಿಗ್ನೇಶ್ ಮೆವಾನಿಗೆ ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದ್ದು, ಈ ಕಾರ್ಯಕ್ರಮ ಮೊದಲೇ ನಿರ್ಧಾರವಾಗಿತ್ತು’’ ಎಂದು ಛತ್ರಭಾರತಿ ಸಂಘಟನೆಯ ಸಾಗರ್ ಬಾಲೇರಾವ್ ಹೇಳಿದ್ದಾರೆ.