ಸಂಘ ಪರಿವಾರದ ಕಿರುಕುಳದ ವಿರುದ್ಧ ಆಕ್ರೋಶ: ಗೋವಾದಲ್ಲಿ ಇಂದಿನಿಂದ ಬೀಫ್ ಬಂದ್

ಪಣಜಿ, ಜ. 6: ಸಂಘ ಪರಿವಾರ ಸಂಘಟನೆಗಳು ಗೋಸಂರಕ್ಷಣೆ ಹೆಸರಿನಲ್ಲಿ ನೀಡುತ್ತಿರುವ ಕಿರುಕುಳವನ್ನು ಪ್ರತಿಭಟಿಸುವ ಸಲುವಾಗಿ ಇಂದಿನಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳುವುದಾಗಿ ಬೀಫ್ ವರ್ತಕರು ಶುಕ್ರವಾರ ಪ್ರಕಟಿಸಿದ್ದಾರೆ.
ಗೋಮಾಂಸ ಮಾರಾಟಗಾರರಿಗೆ ಅನಗತ್ಯ ಕಿರುಕುಳ ನೀಡುತ್ತಿರುವ ಮತ್ತು ನೆರೆ ರಾಜ್ಯಗಳಿಂದ ಗೋಮಾಂಸ ಸಾಗಾಣಿಕೆಗೆ ಅಡ್ಡಿಪಡಿಸುತ್ತಿರುವ ಸಂಘ ಪರಿವಾರ ಸಂಘಟನೆಗಳನ್ನು ಮಟ್ಟಹಾಕಬೇಕು ಎಂದು ವರ್ತಕರು ಆಗ್ರಹಿಸಿದ್ದಾರೆ.
ಈ ಕರಾವಳಿ ರಾಜ್ಯಕ್ಕೆ ಗೋಮಾಂಸ ಸಾಗಾಣಿಕೆ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಸುಲಲಿತಗೊಳಿಸುವವರೆಗೂ ಮುಷ್ಕರ ಮುಂದುವರಿಯಲಿದೆ ಎಂದು ವರ್ತಕರ ಸಂಘ ಎಚ್ಚರಿಕೆ ನೀಡಿದೆ.
ಮುಷ್ಕರದ ಅವಧಿಯಲ್ಲಿ ಇಡೀ ರಾಜ್ಯದಲ್ಲಿ ಎಲ್ಲೂ ಗೋಮಾಂಸ ಮಾರಾಟ ಇರುವುದಿಲ್ಲ. ರಾಜ್ಯ ಸರ್ಕಾರ ಸಮಸ್ಯೆಯನ್ನು ಬಗೆಹರಿಸುವವರೆಗೂ ಈ ನಿರ್ಧಾರ ಅಚಲ ಎಂದು ಖುರೇಶಿ ಮಾಂಸ ವರ್ತಕರ ಸಂಘದ ಅಧ್ಯಕ್ಷ ಮನ್ನಾ ಬೇಪಾರಿ ಹೇಳಿದ್ದಾರೆ.
"ಈ ದಾಳಿಗಳಿಂದ ನಮಗೆ ಸಾಕಾಗಿ ಹೋಗಿದೆ. ನಮ್ಮ ವಹಿವಾಟು ನಡೆಸಲು ಅವರು ಅವಕಾಶ ನೀಡುತ್ತಿಲ್ಲ. ನೆರೆಯ ರಾಜ್ಯಗಳ ಮುಕ್ತ ಮಾರುಕಟ್ಟೆ ಮೂಲಕ ನಾವು ಗೋಮಾಂಸ ತರಿಸುವುದನ್ನು ಇವರು ಗುರಿ ಮಾಡುತ್ತಿದ್ದಾರೆ. ಕರ್ನಾಟಕ ಸರ್ಕಾರದ ಅಧಿಕಾರಿಗಳು ಕೂಡಾ ಕಿರುಕುಳ ನೀಡುತ್ತಿದ್ದಾರೆ" ಎಂದು ಬೇಪಾರಿ ಆಪಾದಿಸಿದ್ದಾರೆ.
ಈ ಗುಂಪುಗಳು ಕಾನೂನು ಕೈಗೆತ್ತಿಕೊಳ್ಳುವುದನ್ನು ತಡೆಯುವ ವರೆಗೂ ಯಾವ ಗೋಮಾಂಸ ಮಳಿಗೆಗಳು ಕೂಡಾ ಕಾರ್ಯನಿರ್ವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕ್ರಿಸ್ಮಸ್ ದಿನದಂದು ಹಿಂದುತ್ವ ಸಂಘಟನೆಗಳು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಮುಷ್ಕರ ನಿರ್ಧಾರ ಕೈಗೊಳ್ಳಲಾಗಿದೆ.