ರಾಷ್ಟ್ರಪತಿ ವಾಹನಕ್ಕೂ ಬರಲಿದೆ ನಂಬರ್ಪ್ಲೇಟ್ !

ಹೊಸದಿಲ್ಲಿ, ಜ. 6: ದೇಶದ ಅತ್ಯುಚ್ಛ ಸಂವಿಧಾನಿಕ ಹುದ್ದೆಗಳಾದ ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಜನರಲ್ಗಳ ವಾಹನಗಳಿಗೆ ಕೂಡಾ ರಿಜಿಸ್ಟ್ರೇಷನ್ ನಂಬರ್ ಪ್ರದರ್ಶಿಸುವ ನಂಬರ್ ಪ್ಲೇಟ್ ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಅತಿಗಣ್ಯರ ವಾಹನಗಳಿಗೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಕ್ರಮ ಕೊನೆಗೊಳಿಸುವ ನಿಟ್ಟಿನಲ್ಲಿ ಕಳೆದ ಎರಡೂವರೆ ವರ್ಷಗಳಲ್ಲಿ ಕೈಗೊಂಡ ಎರಡನೇ ಮಹತ್ವದ ನಿರ್ಧಾರ ಇದಾಗಿದೆ.
ಪ್ರಸ್ತುತ ಈ ವಾಹನಗಳು ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಿದೇಶಿ ಗಣ್ಯರನ್ನು ಕರೆದೊಯ್ಯುವ ವಾಹನಗಳು ಕೇವಲ ಭಾರತ ಸರ್ಕಾರದ ಅಧಿಕೃತ ಲಾಂಛನವನ್ನಷ್ಟೇ ಪ್ರದರ್ಶಿಸುತ್ತವೆ. ರಿಜಿಸ್ಟ್ರೇಷನ್ ನಂಬರ್ ಪ್ರದರ್ಶಿಸುವುದಿಲ್ಲ. ಇದು ವಾಸ್ತವವಾಗಿ ಮೋಟಾರು ವಾಹನಗಳ ಕಾಯ್ದೆ- 1988ರ ಸೆಕ್ಷನ್ 41(6)ರ ಉಲ್ಲಂಘನೆಯಾಗಿದೆ ಎಂದು ದೆಹಲಿ ಹೈಕೋರ್ಟ್ನಲ್ಲಿ ಸಲ್ಲಿಕೆಯಾಗಿರುವ ಅರ್ಜಿಯೊಂದರಲ್ಲಿ ವಾದಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬದಲಾವಣೆಗೆ ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಪ್ರಧಾನಿ ಸೇರಿದಂತೆ ಗಣ್ಯರು ಪ್ರಯಾಣಿಸುವ ವಾಹನಕ್ಕೆ ಕೆಂಪು ದೀಪ ಅಳವಡಿಸುವುದನ್ನು ಕಳೆದ ವರ್ಷ ನಿಷೇಧಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ವಾಹನ ಈಗಾಗಲೇ ನಂಬರ್ಪ್ಲೇಟ್ ಅಳವಡಿಸಿಕೊಂಡಿದೆ.
ನಂಬರ್ಪ್ಲೇಟ್ ಪ್ರದರ್ಶಿಸುವ ಸಂಬಂಧ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಕಾರ್ಯದರ್ಶಿ ಸಂಜಯ್ ಕೊಠಾರಿ ಅವರಿಗೆ ಜನವರಿ 2ರಂದು ನೆನಪೋಲೆ ನೀಡಲಾಗಿದ್ದು, "ಮೋಟಾರು ವಾಹನಗಳ ಕಾಯ್ದೆಯ ಅನ್ವಯ, ರಾಷ್ಟ್ರಪತಿ ಭವನದ ವಾಹನಗಳು ಕೂಡಾ ನಂಬರ್ಪ್ಲೇಟ್ ಪ್ರದರ್ಶಿಸುವುದು ಕಡ್ಡಾಯ" ಎಂದು ಸ್ಪಷ್ಟಪಡಿಸಲಾಗಿದೆ.