ಯುವಕನ ದೇಹದೊಳಗಿದ್ದ 97 ಗುಂಡಿನ ಚೂರುಗಳನ್ನು ಹೊರತೆಗೆದ ವೈದ್ಯರು

ಹೊಸದಿಲ್ಲಿ,ಜ.6 : ನಾಲ್ಕು ವರ್ಷಗಳ ಹಿಂದೆ 27 ವರ್ಷದ ಯುವಕನ ಮೇಲೆ ಸಂಬಂಧಿಯೊಬ್ಬ ಗುಂಡು ಹಾರಿಸಿದ ಪರಿಣಾಮ ಆತನ ದೇಹದೊಳಗೆ ಇಲ್ಲಿಯ ತನಕ ಇದ್ದ ಗುಂಡಿನ ಚೂರುಗಳನ್ನು ರಾಜಧಾನಿಯ ಎಐಐಎಂಎಸ್ ಇಲ್ಲಿನ ತಜ್ಞ ವೈದ್ಯರು ಶಸ್ತ್ರಕ್ರಿಯೆಯ ಮೂಲಕ ಹೊರತೆಗೆದು ಆತನಿಗೆ ಮರುಜೀವ ನೀಡಿದ್ದಾರೆ. ಗುಂಡು ಎದೆಗೆ ಹೊಕ್ಕ ಕೂಡಲೇ ಅದು ಚೂರುಚೂರಾಗಿ ಸುಮಾರು ಸುಮಾರು 100 ಪೆಲ್ಲೆಟ್ ಗಳಾಗಿ ದೇಹದೊಳಗಿದ್ದರೂ ಸುದೈವವಶಾತ್ ಆತನ ಯಾವುದೇ ಅಂಗಗಳಿಗೆ ಅದು ತಗುಲಿರಲಿಲ್ಲ ಹಾಗೂ ಹಾನಿಯುಂಟು ಮಾಡಿರಲಿಲ್ಲ.
ಆದರೆ ದಿನಗಳು ಕಳೆದ ಹಾಗೆ ಈ ಪೆಲ್ಲೆಟ್ ಚೂರುಗಳು ಆತನ ಪ್ರಾಣಕ್ಕೆ ಸಂಚಕಾರವಾಗಲು ಪರಿಣಮಿಸಿ ಸೋಂಕು ಕೂಡ ಉಂಟಾಗಿತ್ತಲ್ಲದೆ ಗುಂಡು ದೇಹದೊಳಕ್ಕೆ ಹೊಕ್ಕ ಜಾಗದಲ್ಲಿ ಒಂಡು ಟೆನಿಸ್ ಬಾಲ್ ಗಾತ್ರದ ತೂತುಂಟಾಗಿ ವಾಸನೆಭರಿತ ದ್ರವ ಕೂಡ ಹೊರಸೂಸಲಾರಂಭಿಸಿತ್ತು.
ಆರಿಫ್ ಹುಸೇನ್ ಎಂಬ ಈ 27ರ ಯುವಕ ತನ್ನ ಊರಾದ ಮೊರಾದಾಬಾದ್ ಹಾಗೂ ಉತ್ತರ ಪ್ರದೇಶದ ಹಲವಾರು ವೈದ್ಯರನ್ನು ಕಂಡರೂ ಯಾರೂ ಈ ಅಪಾಯಕಾರಿ ಶಸ್ತ್ರಕ್ರಿಯೆ ನಡೆಸಲು ಮನಸ್ಸು ಮಾಡಿರಲಿಲ್ಲ.
ಕೊನೆಗೆ ಎಐಐಎಂಎಸ್ ಟ್ರಾಮಾ ಸೆಂಟರಿನ ಡಾ. ಬಿಪ್ಲಬ್ ಮಿಶ್ರಾ ಈ ಶಸ್ತ್ರಕ್ರಿಯೆ ನಡೆಸಲು ಒಪ್ಪಿಕೊಂಡರೂ ಶಸ್ತ್ರಕ್ರಿಯೆಯಲ್ಲಿ ಪ್ರಾಣಾಪಾಯವೂ ಉಂಟಾಗಬಹುದು ಎಂದು ಎಚ್ಚರಿಸಿದ್ದರು. ಹಲವಾರು ಸಿಟಿ ಸ್ಕ್ಯಾನ್ ಮುತ್ತಿತರ ಪರೀಕ್ಷೆಗಳ ನಂತರ ಶಸ್ತ್ರಕ್ರಿಯೆಯ ಮೂಲಕ ಆರಿಫ್ ದೇಹದೊಳಗಿದ್ದ ಎಲ್ಲಾ 97 ಪೆಲ್ಲೆಟ್ ಗಳನ್ನು ಹೊರತೆಗೆಯಲಾಯಿತು. ಆತ ಮಲಗಿದ್ದಾಗ ಗುಂಡು ಹಾರಿಸಲಾಗಿದ್ದರಿಂದ ಆತನ ಕಂಬಳಿಯ ಹತ್ತಿ ತುಂಡುಗಳೂ ಗುಂಡಿನ ಜತೆ ದೇಹ ಪ್ರವೇಶಿಸಿದ್ದು ದೇಹದಳೊಗೆ ಸೇರಿದ್ದ ಅವುಗಳನ್ನೂ ಹೊರತೆಗೆಯಲಾಗಿದೆ. ಶಸ್ತ್ರಕ್ರಿಯೆಯ ನಂತರ ಎದೆಯಲ್ಲಿದ್ದ ತೂತನ್ನು ದೇಹದ ಬೇರೆ ಕಡೆಯ ಮಾಂಸದಿಂದ ಮುಚ್ಚಲಾಗಿದೆ. ರೋಗಿ ಶಸ್ತ್ರಕ್ರಿಯೆಯ ನಂತರ ಗುಣಮಖನಾಗಿದ್ದು ನಾಲ್ಕು ದಿನಗಳಲ್ಲಿಯೇ ಆಸ್ಪತ್ರೆಯಿಂದ ಆತನನ್ನು ಬಿಡುಗಡೆಗೊಳಿಸಲಾಗಿದೆ.
ಆರಿಫ್ ಮದುವೆಗೆ 17 ದಿನಗಳಿವೆಯೆನ್ನುವಾಗ ಆತನ ಮೇಲೆ ಈ ಗುಂಡಿನ ದಾಳಿಯು ಆಸ್ತಿ ವಿವಾದವೊಂದರ ಸಂಬಂಧ ನಡೆದಿತ್ತೆನ್ನಲಾಗಿದೆ.