ಹರ್ಯಾಣ ಸರಕಾರ ಉಡುಗೊರೆ ನೀಡಿದ್ದ ಗೋವುಗಳನ್ನು ಮರಳಿಸಿದ ಬಾಕ್ಸರ್ಗಳು!

ಚಂಡೀಗಡ, ಜ.6: ಹರ್ಯಾಣ ಸರಕಾರ ಕಳೆದ ವರ್ಷದ ನವೆಂಬರ್ನಲ್ಲಿ ರಾಜ್ಯದ ಕ್ರೀಡಾಪಟುಗಳ ಸಾಧನೆಯನ್ನು ಮೆಚ್ಚಿ ಗೋವುಗಳನ್ನು ಉಡುಗೊರೆಯಾಗಿ ನೀಡಿ ಎಲ್ಲರಿಗೂ ಅಚ್ಚರಿಗೊಳಿಸಿತ್ತು. ಮಹಿಳಾ ಯುತ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಪದಕ ವಿಜೇತ ರಾಜ್ಯದ ಆರು ಬಾಕ್ಸರ್ಗಳಿಗೆ ರೋಹ್ಟಕ್ನಲ್ಲಿ ಸರಕಾರದ ವತಿಯಿಂದ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಸಾಮಾನ್ಯವಾಗಿ ಈ ಸಂದರ್ಭದಲ್ಲಿ ಕ್ರೀಡಾಪಟುಗಳಿಗೆ ಸರಕಾರದ ವತಿಯಿಂದ ಧನ ಸಹಾಯ ನೀಡಲಾಗುತ್ತದೆ. ಆದರೆ, ಹರ್ಯಾಣ ಸರಕಾರದ ಪಶುಸಂಗೋಪನಾ ಸಚಿವ ಓಂ ಪ್ರಕಾಶ್ ಎಲ್ಲ ಬಾಕ್ಸರ್ಗಳಿಗೆ ಗೋವುಗಳನ್ನು ನೀಡುವ ಘೋಷಣೆ ಮಾಡಿದ್ದರು.
ಇದೀಗ ಸರಕಾರದ ನಿರ್ಧಾರ ತಿರುಗುಬಾಣವಾಗಿದೆ. ಗೋವುಗಳನ್ನು ಸ್ವೀಕರಿಸಿದ 6 ಬಾಕ್ಸರ್ಗಳ ಪೈಕಿ ಮೂವರು ಗೋವುಗಳನ್ನು ಸರಕಾರಕ್ಕೆ ವಾಪಸು ನೀಡಿದ್ದಾರೆ. ಗೋವುಗಳು ಹಾಲನ್ನು ನೀಡುತ್ತಿಲ್ಲ. ಮನೆಮಂದಿಗೆಲ್ಲಾ ತೊಂದರೆ ನೀಡುತ್ತಿದೆ ಎಂದು ಅವರು ದೂರಿದ್ದಾರೆ.
‘‘ನನ್ನ ತಾಯಿ 5 ದಿನ ದನವನ್ನು ಚೆನ್ನಾಗಿ ನೋಡಿಕೊಂಡಿದ್ದರು. ಹಾಲನ್ನು ನೀಡಲು ಮರೆತ ದನ ನನ್ನ ತಾಯಿಗೆ ಮೂರು ಬಾರಿ ತನ್ನ ಕೋಡಿಯಿಂದ ತಿವಿದು ಗಾಯಗೊಳಿಸಿದೆ. ದನ ತಿವಿದಿರುವ ಕಾರಣ ನನ್ನ ತಾಯಿಗೆ ಗಂಭೀರ ಗಾಯವಾಗಿದೆ. ಆದ್ದರಿಂದ ಸರಕಾರ ನೀಡಿದ ಉಡುಗೊರೆಯನ್ನು ತಕ್ಷಣವೇ ವಾಪಾಸು ನೀಡಿದ್ದೇವೆ. ನಮಗೆ ನಮ್ಮ ಎಮ್ಮೆಯೇ ಸಾಕು’’ ಎಂದು ರೋಹ್ಟಕ್ನ ಜ್ಯೋತಿ ಗುಲಿಯಾ ಹೇಳಿದ್ದಾರೆ.
‘‘ನಮಗೆ ನೀಡಿರುವ ಸ್ಥಳೀಯ ತಳಿಯ ಗೋವುಗಳು ಮನೆಮಂದಿಗೆ ತಮ್ಮ ಕೋಡುಗಳಿಂದ ತಿವಿದು ಗಾಯ ಮಾಡಿವೆ’’ ಎಂದು ಗೋವುಗಳನ್ನು ವಾಪಸು ನೀಡಿರುವ ಇನ್ನಿಬ್ಬರು ಬಾಕ್ಸರ್ಗಳಾದ ನೀತು ಹಾಗೂ ಸಾಕ್ಷಿ ಹೇಳಿದ್ದಾರೆ.
ಈ ಮೂವರು ಬಾಕ್ಸರ್ಗಳು ನ.19 ರಿಂದ 26ರ ತನಕ ಗುವಾಹಟಿಯಲಿ ನಡೆದಿದ್ದ ಹಿರಿಯರ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಜಯಿಸಿದ್ದರು