ಮಹಾರಾಷ್ಟ್ರದಲ್ಲಿ ಎನ್ಸಿಪಿಯೊಂದಿಗೆ ಮೈತ್ರಿಗೆ ಕಾಂಗ್ರೆಸ್ ಸಿದ್ಧ: ಅಶೋಕ್ ಚವಾಣ್

ಹೊಸದಿಲ್ಲಿ, ಜ.8: ಇತ್ತೀಚೆಗೆ ನಡೆದ ಗುಜರಾತ್ ಚುನಾವಣೆಯಲ್ಲಿ ಶರದ್ ಪವಾರ್ ನೇತೃತ್ವದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ(ಎನ್ಸಿಪಿ)ದೊಂದಿಗೆ ಮೈತ್ರಿಮಾಡಿಕೊಳ್ಳದೆ ದೂರ ಉಳಿದಿದ್ದ ಕಾಂಗ್ರೆಸ್ ಮಹಾರಾಷ್ಟ್ರದಲ್ಲಿ ಮೈತ್ರಿ ಮಾಡಿಕೊಳ್ಳಲು ಮುಕ್ತ ಮನಸ್ಸಿನಲ್ಲಿರುವುದಾಗಿ ಹೇಳಿದೆ.
ರಾಜ್ಯಾದ್ಯಂತ ಆರು ತಿಂಗಳ ಕಾಲ ಪರಿವರ್ತನಾ ಯಾತ್ರೆಗೆ ಹೊರಡಲು ಸಜ್ಜಾಗಿರುವ ಮಹಾರಾಷ್ಟ್ರ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಶೋಕ್ ಚವಾಣ್, ‘‘ಸದ್ಯದ ಪರಿಸ್ಥಿತಿಯಲ್ಲಿ ಎನ್ಸಿಪಿಯೊಂದಿಗೆ ಮೈತ್ರಿಮಾಡಿಕೊಳ್ಳಬೇಕಾದ ಅಗತ್ಯವಿದ್ದರೆ, ಆ ಪಕ್ಷದೊಂದಿಗೆ ಕೈಜೋಡಿಸಲು ನಮಗೇನು ತೊಂದರೆಯಿಲ್ಲ.. ಇದರಿಂದ ಎರಡೂ ಪಕ್ಷಗಳು ಗೆಲುವು ಸಾಧಿಸುವುದು ಮುಖ್ಯವಾಗಿದೆ’’ ಎಂದಿದ್ದಾರೆ.
‘‘ಎನ್ಸಿಪಿ ರಾಜ್ಯದಲ್ಲಿ ಕೆಲವು ಭಾಗಗಳಲ್ಲಿ, ಇನ್ನೂ ಕೆಲವು ಜಿಲ್ಲೆಗಳಲ್ಲಿ ಪ್ರಭಾವ ಹೊಂದಿದೆ. ಎರಡೂ ಪಕ್ಷಗಳಿಗೆ ಗೆಲುವು ತರುವುದಾದರೆ ಮೈತ್ರಿ ಸಾಧ್ಯವಿದೆ. ಮೈತ್ರಿಯಿಂದ ಎನ್ಸಿಪಿ ಲಾಭ, ಕಾಂಗ್ರೆಸ್ಗೆ ನಷ್ಟವಾದರೆ, ಮೈತ್ರಿ ಏರ್ಪಡಲು ಸಾಧ್ಯವಿಲ್ಲ’’ ಎಂದು ಮಾಜಿ ಮುಖ್ಯಮಂತ್ರಿ ಚವಾಣ್ ಹೇಳಿದ್ದಾರೆ. 2014ರ ವಿಧಾನಸಭಾ ಚುನಾವಣೆಯ ವೇಳೆ ಕಾಂಗ್ರೆಸ್-ಎನ್ಸಿಪಿ ನಡುವಿನ 15 ವರ್ಷಗಳ ಮೈತ್ರಿ ಮುರಿದುಬಿದ್ದಿತ್ತು. ಕಾಂಗ್ರೆಸ್ ಇತ್ತೀಚೆಗಿನ ದಿನಗಳಲ್ಲಿ ಶರದ್ ಪವಾರ್ರ ರಹಸ್ಯ ಉದ್ದೇಶದ ಮೇಲೆ ಕಣ್ಣಿಟ್ಟಿತ್ತು. ಅವರು ಬಿಜೆಪಿಯೊಂದಿಗೆ ಕೈಜೋಡಿಸುವ ಹಂತದಲ್ಲಿದ್ದಾರೆ ಎಂದು ಗಮನಿಸಿತ್ತು. ಮಹಾರಾಷ್ಟ್ರದಲ್ಲಿ ಮೈತ್ರಿ ಪಕ್ಷಗಳಾಗಿರುವ ಬಿಜೆಪಿ ಹಾಗೂ ಶಿವಸೇನೆಯಲ್ಲಿ ಒಡಕುಂಟಾದಾಗ ಪವಾರ್ ಯಾವ ನಿಲುವು ತಳೆಯುತ್ತಾರೆಂಬ ಬಗ್ಗೆ ಕುತೂಹಲವಿತ್ತು.
ಕಳೆದ ವರ್ಷದ ಆಗಸ್ಟ್ನಲ್ಲಿ ಗುಜರಾತ್ನಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಎನ್ಸಿಪಿಯ ಇಬ್ಬರು ಶಾಸಕರು ಕಾಂಗ್ರೆಸ್ ಅಭ್ಯರ್ಥಿ ಅಹ್ಮದ್ ಪಟೇಲ್ ವಿರುದ್ಧ ಮತ ಚಲಾಯಿಸಿದ ಬಳಿಕ ಎನ್ಸಿಪಿ-ಕಾಂಗ್ರೆಸ್ ನಡುವೆ ಬಿರುಕು ಹೆಚ್ಚಾಗಿತ್ತು. ವಿಧಾನಸಭಾ ಚುನಾವಣೆಯಲ್ಲಿ ಎನ್ಸಿಪಿ ಪ್ರತ್ಯೇಕವಾಗಿ ಸ್ಪರ್ಧಿಸಿತ್ತು.