ಸರಕಾರಿ ಬಸ್ ಚಾಲಕನಾಗಿ ಪ್ರಯಾಣಿಕರಿಗೆ ಡ್ರಾಪ್ ನೀಡಿದ ಶಾಸಕ!
ಸಾರಿಗೆ ಮುಷ್ಕರದ ಬಿಸಿಗೆ ಜನರು ಕಂಗಾಲು

ಚೆನ್ನೈ, ಜ.8: ತಮಿಳುನಾಡು ರಾಜ್ಯ ಸಾರಿಗೆ ನಿಗಮದ ಚಾಲಕರ ರಾಜ್ಯಾದ್ಯಂತ ಮುಷ್ಕರದಿಂದ ತಮಿಳುನಾಡಿನಲ್ಲಿ ಸಂಚಾರ ವ್ಯವಸ್ಥೆಗೆ ಸಮಸ್ಯೆಯಾಗಿದೆ. ಬಸ್ ನಿಲ್ದಾಣವೊಂದರಲ್ಲಿ ಬಸ್ ಗಾಗಿ ಕಾದು ಸುಸ್ತಾಗಿದ್ದ ಪ್ರಯಾಣಿಕರಿಗೆ ಸ್ಥಳಿಯ ಶಾಸಕರೊಬ್ಬರು ನೆರವಾಗಿದ್ದು, ಶಾಸಕರಿಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.
ಬಸ್ ಮುಷ್ಕರದ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಅವಲೋಕಿಸಲು ಶಾಸಕ ಕೆ.ಆರ್. ರಾಜಕೃಷ್ಣನ್ ಇರೋಡ್ ಬಸ್ ನಿಲ್ದಾಣಕ್ಕೆ ಆಗಮಿಸಿದ್ದರು. ಈ ಸಂದರ್ಭ ನಿಲ್ದಾಣದಲ್ಲಿ ನೂರಾರು ಪ್ರಯಾಣಿಕರು ಬಸ್ ಗಾಗಿ ಕಾಯುತ್ತಿರುವುದನ್ನು ಅವರು ಗಮನಿಸಿದ್ದು, ತಾನೇ ಸರಕಾರಿ ಬಸ್ ಚಲಾಯಿಸಿ ಪ್ರಯಾಣಿಕರಿಗೆ ನೆರವಾಗುವುದಾಗಿ ನಿರ್ಧರಿಸಿದರು.
ಟೆಸ್ಟ್ ಡ್ರೈವ್ ಒಂದನ್ನು ನೀಡಲು ಸಾರಿಗೆ ಅಧಿಕಾರಿಗಳು ಹೇಳಿದ್ದು, ನಾನು ಬಸ್ ಚಲಾಯಿಸಬಲ್ಲೆ ಎಂದು ಶಾಸಕರು ಹೇಳಿದ್ದಾರೆ. ಕೆಲ ವರ್ಷಗಳ ಹಿಂದೆ ಶಾಸಕ ರಾಜಕೃಷ್ಣನ್ ಲಾರಿ ಚಾಲಕನಾಗಿದ್ದು, ಅವರ ಬಳಿ ಘನ ವಾಹನದ ಲೈಸೆನ್ಸ್ ಇತ್ತು. ಬಸ್ ಏರಿದ ಶಾಸಕರು ಡ್ರೈವರ್ ಸೀಟ್ ನಲ್ಲಿ ಕುಳಿತು ಬಸ್ ಚಲಾಯಿಸಿ ಪ್ರಯಾಣಿಕರಿಗೆ ನೆರವಾದರು. ನಂತರ ಅಂಧಿಯೂರಿಗೆ ಹೋಗಲು ಬಸ್ ಗಾಗಿ ಕಾಯುತ್ತಿದ್ದವರಿಗೂ ಅವರು ಡ್ರಾಪ್ ನೀಡಿದ್ದಾರೆ. ಶಾಸಕ ರಾಜಕೃಷ್ಣನ್ ರ ಈ ಕೆಲಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಆದರೆ ಮುಷ್ಕರ ಹೂಡಿದ್ದ ಸಂಘಟನೆಗಳು ಶಾಸಕರು ತಮ್ಮ ಬೇಡಿಕೆಯನ್ನು ಈಡೇರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಷ್ಕರದ ಸಂದರ್ಭ ಕೆಲ ರಿಕ್ಷಾ ಚಾಲಕರು ಪ್ರಯಾಣಿಕರಿಂದ 3 ಪಟ್ಟು ಹೆಚ್ಚು ಹಣ ವಸೂಲಿ ಮಾಡಿದ್ದಾರೆ ಎನ್ನಲಾಗಿದೆ.
Anthiyur #MLA Raja Krishnan drives a government bus as most of the transport dept employees are participating in the indefinite #BusStrike over wage hike. @NewsX pic.twitter.com/erDx49q7Yx
— MUGILAN CHANDRAKUMAR (@Mugilan__C) January 5, 2018