ನ್ಯಾ.ಲೋಯಾ ಸಾವಿನ ತನಿಖೆಗೆ ಒತ್ತಾಯಿಸಿ ಧರಣಿ: ಹೋರಾಟಗಾರರನ್ನು ಬಂಧಿಸಿದ ಪೊಲೀಸರು

ಹೊಸದಿಲ್ಲಿ, ಜ.10: ಸೊಹ್ರಾಬುದ್ದೀನ್ ಎನ್ ಕೌಂಟರ್ ಪ್ರಕರಣದ ನ್ಯಾಯಮೂರ್ತಿಯಾಗಿದ್ದ ಬ್ರಿಜ್ ಗೋಪಾಲ್ ಹರ್ ಕಿಷನ್ ಲೋಯಾ ಅವರ ಸಾವಿನ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸಿ ಹೋರಾಟಗಾರರು ಬಾಂಬೆ ಹೈಕೋರ್ಟ್ ಮುಂಭಾಗ ಧರಣಿ ನಡೆಸಿದ್ದು, ಪೊಲೀಸರು ಅವರನ್ನು ಬಂಧಿಸಿದ್ದಾರೆ.
ಸೊಹ್ರಾಬುದ್ದೀನ್ ಎನ್ ಕೌಂಟರ್ ಪ್ರಕರಣದ ನ್ಯಾಯಾಧೀಶರಾಗಿದ್ದ ಲೋಯಾ ನಾಗ್ಪುರ್ ನಲ್ಲಿ ಮೃತಪಟ್ಟಿದ್ದರು. ಲೋಯಾ ಸಾವಿನ ಬಗ್ಗೆ ಅವರ ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿದ್ದ ಬಗ್ಗೆ ಕಾರವಾನ್ ಮ್ಯಾಗಝಿನ್ ವರದಿ ಮಾಡಿತ್ತು.
“ನ್ಯಾ.ಲೋಯಾರನ್ನು ಕೊಂದವರು ಯಾರು?” ಎಂಬ ಟಿಶರ್ಟ್ ಧರಿಸಿದ್ದ ಹೋರಾಟಗಾರರು ನ್ಯಾ. ಲೋಯಾ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಅಂಧೇರಿಯ ಹೋರಾಟಗಾರ ಅಶೋಕ್ ಪೈ, ವಿನೋದ್ ಚಂದ್, ಸಮೀರ್ ರೊಹೇಕರ್, ಅಶೋಕ್ ಕುಮಾರ್ ಪಾಂಡೆ, ವಿನೋದ್ ಝಾ, ನಿತಿನ್ ಬಸ್ರೂರ್ ಹಾಗು ಶಿಬು ಪಿಳ್ಳೈ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ,
“5 ಗಂಟೆಗಳ ಕಾಲ ಅವರು ನಮ್ಮನ್ನು ಬಂಧಿಸಿದ್ದರು. ಪೊಲೀಸ್ ಇಲಾಖೆಯ ಮೇಲೆ ಎಷ್ಟೊಂದು ಒತ್ತಡವಿದೆ ಎನ್ನುವುದನ್ನು ಇದು ತೋರಿಸುತ್ತದೆ. ನಾವು ಶಾಂತಿಯುತವಾಗಿ ಧರಣಿ ನಡೆಸುತ್ತಿದ್ದೆವು” ಎಂದು ಅಶೋಕ್ ಪೈ ಹೇಳಿದರು.
“ನ್ಯಾ.ಲೋಯಾ ಅವರ ಸಾವಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ನಾವು ಬಯಸಿದ್ದೇವೆ. ಅವರ ಸಾವಿನ ಬಗ್ಗೆ ಸಮರ್ಪಕ ತನಿಖೆ ನಡೆಯಬೇಕು. ಈ ಪ್ರಕರಣದಲ್ಲಿ ರಾಜಕೀಯ ಒತ್ತಡವಿದೆ ಎಂದು ನಮಗೆ ಸಂಶಯವಿದೆ. ಎಲ್ಲರೂ ಈ ಬಗ್ಗೆ ಸುಮ್ಮನಿದ್ದಾರೆ” ಎಂದು ಪೈ ಹೇಳಿದರು.
ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಗೊಂಡು ಇವರೆಲ್ಲರೂ ಧರಣಿಯಲ್ಲಿ ಪಾಲ್ಗೊಂಡಿದ್ದರು.