ಜಯಲಲಿತಾ ಹೆಸರನ್ನು ನೋಬಲ್ ಪುರಸ್ಕಾರಕ್ಕೆ ಶಿಫಾರಸು ಮಾಡಿ : ಎಐಎಡಿಎಂಕೆ ನಾಯಕನಿಂದ ಸರಕಾರಕ್ಕೆ ಸಲಹೆ

ಚೆನ್ನೈ,ಜ.10 : ರಾಜ್ಯದಲ್ಲಿ ಹೆಣ್ಣು ಶಿಶುವಿನ ಹತ್ಯೆ ತಡೆಯಲು ಜಾರಿ ಮಾಡಲಾಗಿದ್ದ ಯೋಜನೆಗಾಗಿ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ಅವರ ಹೆಸರನ್ನು ನೋಬೆಲ್ ಪುರಸ್ಕಾರಕ್ಕಾಗಿ ಶಿಫಾರಸು ಮಾಡಬೇಕೆಂದು ಹಿರಿಯ ಎಐಎಡಿಎಂಕೆ ನಾಯಕ ಹಾಗೂ ತಮಿಳುನಾಡು ವಿಧಾನಸಭೆಯ ಡೆಪ್ಯುಟಿ ಸ್ಪೀಕರ್ ವಿ ಜಯರಾಮನ್ ಹೇಳಿದ್ದಾರೆ.
ರಾಜ್ಯಪಾಲರ ಭಾಷಣಕ್ಕೆ ವಂದನಾರ್ಪಣೆ ಸಲ್ಲಿಸಲು ಮಂಡಿಸಲಾದ ನಿಲುವಳಿ ಸಂದರ್ಭ ವಿಧಾನಸಭೆಯಲ್ಲಿ ಮಾತನಾಡಿದ ಜಯರಾಮನ್, 1992ರಲ್ಲಿ ಜಯಲಲಿತಾ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೊಳಿಸಿದ್ದ ತೊಟ್ಟಿಲ್ ಕುಝಂಥೈಗಲ್ ಥಿಟ್ಟಂ (ಕ್ರೇಡಲ್ ಬೇಬಿ) ಯೋಜನೆಯನ್ನು ನೋಬೆಲ್ ಶಾಂತಿ ಪಾರಿತೋಷ ಪುರಸ್ಕೃತೆ ಮದರ್ ತೆರೆಸಾ ಕೂಡ ಪ್ರಶಂಸಿಸಿದ್ದರು ಎಂದು ಹೇಳಿದ್ದಾರೆ.
ಆರಂಭದಲ್ಲಿ ಸೇಲಂನಲ್ಲಿ ಜಾರಿಗೊಳಿಸಲಾದ ಯೋಜನೆ ಮುಂದೆ ಹಂತಹಂತವಾಗಿ ಇಡೀ ರಾಜ್ಯದಲ್ಲಿ ಜಾರಿಗೊಂಡು ಲಿಂಗಾನುಪಾತದಲ್ಲೂ ಸುಧಾರಣೆ ತಂದಿತೆಂದು ಅವರು ಸ್ಮರಿಸಿದರು.
ಹೆಣ್ಣು ಶಿಶು ಹತ್ಯೆ ತಡೆಯುವ ಉದ್ದೇಶದಿಂದ ಜಾರಿಗೊಳಿಸಲಾಗಿದ್ದ ಈ ಯೋಜನೆಯನ್ವವ ತಾವು ಸಾಕಲಿಚ್ಛಿಸದ ಹೆಣ್ಣು ಮಗುವನ್ನು ಸರಕಾರಕ್ಕೆ ಮಹಿಳೆಯರು ಅನಾಮಿಕವಾಗಿಯೇ ನೀಡಬಹುದಾಗಿತ್ತು. ಜಯಲಲಿತಾ ಅವರು ಮೊದಲ ಬಾರಿಗೆ 1991-96 ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆ ಜಾರಿಯಾಗಿತ್ತು.
ಈ ಯೋಜನೆ ಜಾರಿಗೊಳಿಸಿದ ಅಮ್ಮ(ಜಯಲಲಿತಾ) ಅವರನ್ನು ತಮಿಳುನಾಡು ಮರೆಯುವುದಿಲ್ಲ. ಸರಕಾರ ಅವರ ಹೆಸರನ್ನು ನೋಬೆಲ್ ಪ್ರಶಸ್ತಿಗಾಗಿ ಶಿಫಾರಸು ಮಾಡಬೇಕು ಎಂದು ಜಯರಾಮನ್ ಆಗ್ರಹಿಸಿದರು.