ಚಿಕ್ಕಮಗಳೂರು: ನೈಸರ್ಗಿಕ ಆರೋಗ್ಯ ಕೇಂದ್ರ ಉದ್ಘಾಟನೆ
ಚಿಕ್ಕಮಗಳೂರು, ಜ.10: ನಗರದ ಮಾರ್ಕೆಟ್ ರಸ್ತೆಯಲ್ಲಿರುವ ಸೆರಾಕೇರ್ ನೈಸರ್ಗಿಕ ಆರೋಗ್ಯ ಕೇಂದ್ರವನ್ನು ಪ್ರಜಾಪಿತ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದ ಜಿಲ್ಲಾ ಸಂಚಾಲಕರಾದ ರಾಜಯೋಗಿನಿ ಬಿ.ಕೆ.ಭಾಗ್ಯಕ್ಕ ಉದ್ಘಾಟಿಸಿದರು.
ನಂತರ ಅವರು ಮಾತನಾಡಿ, ವರ್ತಮಾನ ಸಮಯದಲ್ಲಿ ಜನರು ಎಲ್ಲಾ ರೋಗಕ್ಕೂ ಔಷಧಿಯನ್ನು ತೆಗೆದುಕೊಳ್ಳುತ್ತಿರುವುದರಿಂದ ಅದರ ಅಡ್ಡ ಪರಿಣಾಮಗಳು ಹೆಚ್ಚಾಗುತ್ತಿದೆ. ಎಲ್ಲರೂ ಈ ನೈಸರ್ಗಿಕ ಚಿಕಿತ್ಸೆಯನ್ನು ಪಡೆದು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ. ಸೆರಾಕೇರ್ ಸಂಸ್ಥೆಯಲ್ಲಿ ಎಲ್ಲಾ ಸಹೋದರ/ ಸಹೋದರಿಯರು ಸೇವಾ ಮನೋಭಾವದಿಂದ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದ್ದಾರೆ.
ಈ ಸಂದಂರ್ಭದಲ್ಲಿ ಸೆರಾಕೇರ್ ಸಂಸ್ಥೆಯ ಮುಖ್ಯಸ್ಥ ದೇವರಾಜ್ ಮಾತನಾಡಿ, ಇಲ್ಲಿ ಧೀರ್ಘಕಾಲದ ನೋವಿನ ನಿವಾರಣೆ ನೈಸರ್ಗಿಕ ಚಿಕಿತ್ಸೆಯಿಂದ ಹಾಗೂ ವ್ಯಾಯಾಮದ ಮುಖಾಂತರ ನಿಮ್ಮ ನೋವಿಗೆ ಅನುಗುಣವಾಗಿ ಥೆರಫಿಯನ್ನು ನೀಡಲಾಗುವುದು. ಬೆನ್ನು ನೋವು, ಕತ್ತು ನೋವು, ಮಂಡಿ ನೋವು, ರಕ್ತದೊತ್ತಡ, ಸಕ್ಕರೆ ಕಾಯಿಲೆ, ನರಗಳ ದೌರ್ಬಲ್ಯ ಇತ್ಯಾದಿ ರೋಗಗಳಿಗೆ ಉಚಿತ ಚಿಕಿತ್ಸೆಯ ಮುಖಾಂತರ ನಿವಾರಣೆ ಮಾಡುತ್ತೇವೆ. ಜನರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.