ಬಿಹಾರ: ರೈಲಿನಲ್ಲಿ ಬೆಂಕಿ ಅನಾಹುತ

ಪಾಟ್ನ, ಜ.10: ಪಾಟ್ನಾದಿಂದ 100 ಕಿ.ಮೀ. ದೂರದ ಮೊಕಾಮ ನಿಲ್ದಾಣದಲ್ಲಿ ನಿಂತಿದ್ದ ರೈಲಿನಲ್ಲಿ ಬೆಂಕಿ ಅನಾಹುತ ಸಂಭವಿಸಿ ನಾಲ್ಕು ಬೋಗಿಗಳು ಸುಟ್ಟು ಭಸ್ಮವಾದ ಘಟನೆ ನಡೆದಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಮಂಗಳವಾರ ರಾತ್ರಿ 10:20ಕ್ಕೆ ಮೊಕಾಮ ನಿಲ್ದಾಣಕ್ಕೆ ಆಗಮಿಸಿ ಅಲ್ಲಿ ತಂಗಿದ್ದ ದಾನಾಪುರ್-ಮೊಕಾಮ ‘ಮೆಮು’ (ಮೈನ್ಲೈನ್ ಇಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್) ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ನಾಲ್ಕು ಬೋಗಿಗಳಿಗೆ ವ್ಯಾಪಿಸಿದೆ. ಕೂಡಲೇ ಕಾರ್ಯಪ್ರವೃತ್ತರಾದ ರೈಲ್ವೇ ಸಿಬ್ಬಂದಿಗಳು ಉಳಿದ 12 ಬೋಗಿಗಳನ್ನು ಪ್ರತ್ಯೇಕಿಸಿದರು ಎಂದು ಪೂರ್ವ ಕೇಂದ್ರ ರೈಲ್ವೇಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ್ ಕುಮಾರ್ ತಿಳಿಸಿದ್ದಾರೆ. ಯಾವುದೇ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿಲ್ಲ.ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ.
ರೈಲ್ವೇ ಸಿಬ್ಬಂದಿ ಜೊತೆ ರೈಲ್ವೇ ಸುರಕ್ಷಾ ಪಡೆ, ಗವರ್ನ್ಮೆಂಟ್ ರೈಲ್ವೇ ಪೊಲೀಸ್ ಸಿಬ್ಬಂದಿಗಳು ಬೆಂಕಿ ಹರಡದಂತೆ ನಿಯಂತ್ರಿಸಿದ್ದು ಬಳಿಕ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿದರು. ಕಿಡಿಗೇಡಿಗಳ ಕೃತ್ಯ ಎಂದು ಮೇಲ್ನೋಟಕ್ಕೆ ತಿಳಿದುಬಂದಿರುವುದಾಗಿ ರಾಜೇಶ್ ಕುಮಾರ್ ತಿಳಿಸಿದ್ದಾರೆ.