ಸಿದ್ದರಾಮಯ್ಯ ಬಗ್ಗೆ ಅಸಭ್ಯ ಟ್ವೀಟ್ ಮಾಡಿ ಟ್ವಿಟರಿಗರಿಂದ ಉಗಿಸಿಕೊಂಡ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ

ಹೊಸದಿಲ್ಲಿ, ಜ.11: ಕಾರ್ಯಕ್ರಮವೊಂದರ ಸಂದರ್ಭ ಯುವತಿಯರ ಒಂದು ಗುಂಪಿನೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೆಲ್ಫಿ ತೆಗೆಸಿಕೊಂಡ ವಿಚಾರದಲ್ಲಿ ಅಸಭ್ಯ ಟ್ವೀಟ್ ಒಂದನ್ನು ಮಾಡಿ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯ ಟ್ವಿಟರಿಗರಿಂದ ಉಗಿಸಿಕೊಂಡಿದ್ದಾರೆ.
‘‘ಸಿದ್ದರಾಮಯ್ಯನವರು ಸಾರ್ವಜನಿಕವಾಗಿ ಮಹಿಳೆಯರಿಂದ ದೂರವಿರಬಹುದೇ" ಎನ್ನುವ ಅರ್ಥದ ಟ್ವೀಟ್ ಮಾಡಿದ್ದ ಮಾಲವಿಯ ಅದರ ಜತೆಗೆ ಮುಖ್ಯಮಂತ್ರಿ ಸೆಲ್ಫಿ ತೆಗೆಸಿಕೊಂಡ ಸಂದರ್ಭದ ವೀಡಿಯೋ ತುಣುಕೊಂದನ್ನೂ ಪೋಸ್ಟ್ ಮಾಡಿದ್ದರು. ಯುವತಿಯೊಬ್ಬಳು ವೇದಿಕೆಯಲ್ಲಿ ಸೆಲ್ಫಿ ತೆಗೆಯಲು ಯತ್ನಿಸಿದಾಗ ಮುಖ್ಯಮಂತ್ರಿ ಆಕೆಯನ್ನು ಹತ್ತಿರಕ್ಕೆಳೆದು ಗ್ರೂಪ್ ಸೆಲ್ಫಿ ಗೆ ಅನುವು ಮಾಡಿಕೊಟ್ಟಿದ್ದು ವೀಡಿಯೋದಲ್ಲಿ ಕಾಣಿಸುತ್ತದೆ.
ಮಾಳವಿಯ ಅವರ ಟ್ವೀಟಿಗೆ ಕಾಂಗ್ರೆಸ್ ನಾಯಕಿ ರಮ್ಯಾ ಖಾರವಾಗಿ ಪ್ರತಿಕ್ರಿಯಿಸಿದ್ದು ‘‘ಇದು ಚುನಾವಣಾ ಸಮಯ, ಬಿಜೆಪಿಯವರು ಈಗಾಗಲೇ ಜಾರಿರುವುದಕ್ಕಿಂತಲೂ ಇನ್ನೂ ಕೆಳಮಟ್ಟಕ್ಕೆ ಜಾರುವ ಸಮಯ’’ ಎಂದು ಟ್ವೀಟ್ ಮಾಡಿದ್ದಾರೆ.
ಮಾಳವಿಯ ಅವರ ಟ್ವೀಟ್ ಹಾಗೂ ವೀಡಿಯೋವನ್ನು ಬಿಜೆಪಿ ಬೆಂಬಲಿಗರು ರಿಟ್ವೀಟ್ ಮಾಡಿದರೂ ಹಲವಾರು ಟ್ವಿಟ್ಟರಿಗರು "ಆ ವೀಡಿಯೋದಲ್ಲಿ ಅಸಭ್ಯವೆನಿಸುವಂತಹುದ್ದೇನೂ ಕಂಡಿಲ್ಲ. ಇದು ಕೇವಲ ಸಿದ್ದರಾಮಯ್ಯರನ್ನು ಕೆಟ್ಟ ದೃಷ್ಟಿಯಲ್ಲಿ ಬಿಂಬಿಸುವ ಯತ್ನ" ಎಂದು ಹೇಳಿಕೊಂಡಿದ್ದಾರಲ್ಲದೆ "ಮಾಳವಿಯ ಅಗ್ಗದ ಪ್ರಚಾರ ತಂತ್ರಗಳಿಗೆ ಮೊರೆ ಹೋಗಿದ್ದಾರೆ" ಎಂದಿದ್ದಾರೆ.
ಇಬ್ಬರು ಬಿಜೆಪಿ ನಾಯಕರು ಕರ್ನಾಟಕದ ವಿಧಾನಸಭೆಯಲ್ಲಿ ಬ್ಲೂಫಿಲ್ಮ್ ನೋಡುತ್ತಿರುವಾಗ ಸಿಕ್ಕಿ ಬಿದ್ದಿರುವ ಘಟನೆಯನ್ನೂ ಕೆಲ ಟ್ವಿಟ್ಟರಿಗರು ನೆನಪಿಸಿದ್ದಾರೆ. ಕಾಂಗ್ರೆಸ್ ನಾಯಕರೊಬ್ಬರ ಫೋಟೋ ಹಾಗೂ ವೀಡಿಯೋವನ್ನು ಮಾಳವಿಯ ಪೋಸ್ಟ್ ಮಾಡಿರುವುದು ಇದೇ ಮೊದಲಲ್ಲ. ಕಳೆದ ನವೆಂಬರ್ ತಿಂಗಳಲ್ಲಿ ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ತಮ್ಮ ಸೋದರಿ ಹಾಗೂ ಸೋದರ ಸೊಸೆಯನ್ನು ಆಲಂಗಿಸುವ ಚಿತ್ರಗಳೂ ಸೇರಿದಂತೆ ನೆಹರೂ ಮಹಿಳೆಯರ ಜತೆಗಿರುವ ಹಲವು ಚಿತ್ರಗಳ ಕೊಲಾಜ್ ಒಂದನ್ನೂ ಅವರು ಪೋಸ್ಟ್ ಮಾಡಿದ್ದರು. ನಂತರ ಆಲ್ಟ್ ನ್ಯೂಸ್ ಈ ಚಿತ್ರಗಳ ಅಸಲಿಯತ್ತನ್ನು ಬಹಿರಂಗಪಡಿಸಿತ್ತು.
ಪಾಟಿದಾರ್ ನಾಯಕ್ ಹಾರ್ದಿಕ್ ಪಟೇಲ್ ಅವರದ್ದೆಂದು ಆರೋಪಿಸಲಾದ ಸೆಕ್ಸ್ ವೀಡಿಯೋವೊಂದು ಬಹಿರಂಗಗೊಂಡ ನಂತರ ಈ ಕೊಲಾಜ್ ಟ್ವೀಟ್ ಮಾಡಿದ್ದ ಮಾಳವಿಯ ‘‘ಹಾರ್ದಿಕ್ ಹ್ಯಾಸ್ ಮೋರ್ ಆಫ್ ನೆಹರೂಸ್ ಡಿಎನ್ಎ’’ ಎಂದು ಟ್ವೀಟ್ ಕೂಡ ಮಾಡಿದ್ದರು.
Can @siddaramaiah keep his hands off women in public? pic.twitter.com/bk6pKHAR0c
— Amit Malviya (@malviyamit) January 9, 2018