ಬೇನಾಮಿ ವ್ಯವಹಾರಗಳಿಂದ ದೂರವಿರಿ: ತೆರಿಗೆದಾರರಿಗೆ ಐಟಿ ಇಲಾಖೆ ಎಚ್ಚರಿಕೆ

ಹೊಸದಿಲ್ಲಿ, ಜ.11: ಬೇನಾಮಿ ವ್ಯವಹಾರಗಳಿಂದ ದೂರವಿರುವಂತೆ ಸಾರ್ವಜನಿಕರಿಗೆ ಆದಾಯ ತೆರಿಗೆ ಇಲಾಖೆ ಎಚ್ಚರಿಸಿದೆ. ಹೊಸದಾಗಿ ಜಾರಿಯಾಗಿರುವ ಬೇನಾಮಿ ವ್ಯವಹಾರ (ನಿಷೇಧ) ತಿದ್ದುಪಡಿ ಕಾಯಿದೆ-2016 ಇದರ ಉಲ್ಲಂಘನೆ ನಡೆದಲ್ಲಿ ಕ್ರಿಮಿನಲ್ ಮೊಕದ್ದಮೆ ಹಾಗೂ ಏಳು ವರ್ಷಗಳ ತನಕ ಕಠಿಣ ಶಿಕ್ಷೆ ವಿಧಿಸಬಹುದಾಗಿದೆ ಎಂದು ಇಲಾಖೆ ಹೇಳಿದೆ.
ವಿವಿಧ ಪ್ರಮುಖ ರಾಷ್ಟ್ರೀಯ ದೈನಿಕಗಳಲ್ಲಿ ‘ಕೀಪ್ ಅವೇ ಫ್ರಾಮ್ ಬೇನಾಮಿ ಟ್ರಾನ್ಸಾಕ್ಷನ್ಸ್’ ಎಂಬ ಶೀರ್ಷಿಕೆಯ ಅಡಿಯಲ್ಲಿ ಪ್ರಕಟವಾದ ಜಾಹೀರಾತಿನಲ್ಲಿ ಕಾಳಧನವನ್ನು ಮಾನವತೆಯ ವಿರುದ್ಧದ ಅಪರಾಧ ಎಂದು ಬಣ್ಣಿಸಲಾಗಿದೆ ಹಾಗೂ ಜಾಗೃತ ನಾಗರಿಕರು ಅದನ್ನು ನಿರ್ಮಾಲನೆಗೈಯಲು ಸರಕಾರದ ಜತೆ ಕೈಜೋಡಿಸಬೇಕೆಂದು ಆಗ್ರಹಿಸಿದೆ.
‘‘ಬೇನಾಮಿ ಆಸ್ತಿ ಯಾರ ಹೆಸರಲ್ಲಿ ಇರುವುದೋ ಅವರ ವಿರುದ್ಧ, ಅದನ್ನು ಖರೀದಿಸಿದವರ ವಿರುದ್ಧ ಹಾಗೂ ಇಂತಹ ಆಸ್ತಿಯನ್ನು ಖರೀದಿಸಲು ಸಹಾಯ ಮಾಡಿದವರ ವಿರುದ್ಧ ಕಾನೂನಿನನ್ವಯ ಕ್ರಮ ಕೈಗೊಳ್ಳಬಹುದಾಗಿದೆ, ಏಳು ವರ್ಷಗಳ ತನಕ ಸಜೆ ವಿಧಿಸಬಹುದಾಗಿದೆ ಹಾಗೂ ಬೇನಾಮಿ ಆಸ್ತಿಯ ಮಾರುಕಟ್ಟೆ ದರದ ಶೇ.25ರಷ್ಟು ಹಣವನ್ನು ದಂಡವಾಗಿ ಪಾವತಿಸಬೇಕಾಗಬಹುದು’’ ಎಂದು ಐಟಿ ಇಲಾಖೆಯ ಜಾಹೀರಾತು ತಿಳಿಸುತ್ತದೆ.
ತೆರಿಗೆ ಇಲಾಖೆ ದೇಶಾದ್ಯಂತ 1,833 ಕೋಟಿ ರೂ. ಮೌಲ್ಯದ ಬೇನಾಮಿ ಆಸ್ತಿಗಳನ್ನು ವಶಪಡಿಸಿಕೊಂಡಿದೆಯಲ್ಲದೆ, ನವೆಂಬರ್ 1, 2016ರಿಂದ ಅಕ್ಟೋಬರ್ 2017ರ ಅವಧಿಯಲ್ಲಿ 517 ನೋಟಿಸುಗಳನ್ನು ಜಾರಿಗೊಳಿಸಿದೆ ಹಾಗೂ 541 ಆಸ್ತಿಗಳನ್ನು ಮುಟ್ಟುಗೋಲು ಹಾಕಿದೆ.
ಹೊಸ ಬೇನಾಮಿ ವ್ಯವಾರ (ನಿಷೇಧ) ತಿದ್ದುಪಡಿ ಕಾಯಿದೆ 2016ರ ಅನ್ವಯ ನವೆಂಬರ್ 1, 2016ರಿಂದ ಇಲಾಖೆ ಕ್ರಮ ಕೈಗೊಳ್ಳಲು ಆರಂಭಿಸಿತ್ತು.
ಈ ಕಾಯಿದೆಯನ್ವಯ ಇಲಾಖೆಗೆ ತಪ್ಪು ಮಾಹಿತಿ ನೀಡುವವರು ಕೂಡ ಕಾನೂನು ಕ್ರಮ ಹಾಗೂ 5 ವರ್ಷಗಳ ತನಕ ಜೈಲು ಶಿಕ್ಷೆ ಅನುಭವಿಸಬೇಕಾದೀತು ಹಾಗೂ ಬೇನಾಮಿ ಆಸ್ತಿಯ ಮಾರುಕಟ್ಟೆ ದರದ ಶೇ.10ರಷ್ಟನ್ನು ದಂಡವಾಗಿ ಪಾವತಿಸಬೇಕು ಎಂದು ಜಾಹೀರಾತಿನಲ್ಲಿ ತಿಳಿಸಲಾಗಿದೆ.
‘‘ಬೇನಾಮಿ ಆಸ್ತಿಯನ್ನು ಮುಟ್ಟುಗೋಲು ಹಾಕಿದ ಹೊರತಾಗಿಯೂ ತೆರಿಗೆ ತಪ್ಪಿಸಿದ್ದಕ್ಕಾಗಿ ಆದಾಯ ತೆರಿಗೆ ಕಾಯಿದೆ-1961ರ ಅನ್ವಯ ಕ್ರಮ ಎದುರಿಸಬೇಕು’’ ಎಂದು ಜಾಹೀರಾತು ತಿಳಿಸಿದೆ.