ಇಂತಹ ವಿಕೃತಿ ಬಗ್ಗೆ ನೀವು ಕೇಳಿರಲಿಕ್ಕಿಲ್ಲ
ಈ ಚಪ್ಪಲಿ ಕ್ಯಾಮರಾ ಭೂಪನ ಚಟಕ್ಕೆ ಮದ್ದೇನು?

ತಿರುವನಂತಪುರಂ, ಜ.11: ಜಗತ್ತಿನಲ್ಲಿ ಚಿತ್ರವಿಚಿತ್ರ ವಿಕೃತಿಯ ಜನರಿರುತ್ತಾರೆ. ಆದರೆ ಕೇರಳದ ವ್ಯಕ್ತಿಯೊಬ್ಬ ವಿಕೃತಿಯನ್ನು ನೀವು ಹಿಂದೆಂದೂ ಕೇಳಿರಲಿಕ್ಕಿಲ್ಲ. ಬಹಳ ಬುದ್ಧಿವಂತಿಕೆಯಿಂದ ಈತ ಕಂಡುಹಿಡಿದ ವಿಧಾನವೊಂದು ಈತನಿಗೇ ಮುಳುವಾಗಿದ್ದು, ಇದೀಗ ಪೊಲೀಸರ ವಶದಲ್ಲಿದ್ದಾನೆ.
ಸ್ಕರ್ಟ್ ಧರಿಸಿದ ಯುವತಿಯರ ಫೋಟೊಗಳನ್ನು ಮೊಬೈಲ್ ನಲ್ಲಿ ಸೆರೆಹಿಡಿಯುವ ವಿಕೃತರ ಬಗ್ಗೆ ನೀವು ಕೇಳಿರಬಹುದು. ಆದರೆ ಕೇರಳದ ಬೈಜು ಎಂಬಾತ ಇದೆಲ್ಲವನ್ನೂ ಮೀರಿಸುವ ವಿಕೃತಿಯನ್ನು ಮೆರೆದು ಪೊಲೀಸರ ಅತಿಥಿಯಾಗಿದ್ದಾನೆ.
ತನ್ನ ಪಾದರಕ್ಷೆಯ ಒಳಭಾಗವನ್ನು ಕತ್ತರಿಸಿ ಹೆಬ್ಬೆರಳಿನ ಜಾಗದಲ್ಲಿ ತೂತು ಮಾಡಿದ್ದ ಬೈಜು ಅದರೊಳಗೆ ಮೇಲ್ಮುಖವಾಗಿ ಮೊಬೈಲ್ ಫೋನನ್ನು ಇರಿಸಿದ್ದ. ತೂತಿನ ಜಾಗದಲ್ಲಿ ಮೊಬೈಲ್ ಕ್ಯಾಮರಾವಿದ್ದು, ವಿಡಿಯೋ ರೆಕಾರ್ಡ್ ಆಗುತ್ತಿತ್ತು. ಇಷ್ಟೇ ಅಲ್ಲದೆ ದೇಹದ ಭಾರದಿಂದ ಮೊಬೈಲ್ ಗೆ ತೊಂದರೆಯಾಗಬಾರದೆಂದು ಸ್ಟೀಲ್ ನಿಂದ ಕವರೊಂದನ್ನು ಕೂಡ ತಯಾರಿಸಿ ಅದರೊಳಗೆ ಮೊಬೈಲನ್ನು ಇಟ್ಟಿದ್ದ.
ಇಲ್ಲಿನ ಶಾಲೆಯೊಂದರಲ್ಲಿ ನಡೆಯುತ್ತಿದ್ದ ಸಮಾರಂಭಕ್ಕೆ ಹೋಗಿದ್ದ ಬೈಜು ಜನರಿರುವೆಡೆಗೆ ನುಗ್ಗುತ್ತಿದ್ದ. ಆದರೆ ಇಷ್ಟೆಲ್ಲಾ ಸಿದ್ಧತೆಗಳನ್ನು ಮಾಡಿದ್ದ ಬೈಜುವಿಗೆ ತನ್ನನ್ನು ಮಫ್ತಿಯಲ್ಲಿದ್ದ ಪೊಲೀಸರು ಗಮನಿಸುತ್ತಿದ್ದಾರೆ ಎನ್ನುವುದು ಗೊತ್ತಾಗಿರಲಿಲ್ಲ. ತನ್ನ ಕಾಲನ್ನು ನೋಡುತ್ತಾ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುತ್ತಿದ್ದ ಆತನನ್ನು ಪೊಲೀಸರು ಗಮನಿಸಿದ್ದರು.
“ಆತ ಜನರ ಗುಂಪಿನ ನಡುವೆ ನಿಂತು ವಿಡಿಯೋ ಮಾಡುತ್ತಿದ್ದ. ಕೆಲವೊಮ್ಮೆ ಕ್ಯಾಮರಾವನ್ನು ಆನ್ ಮಾಡಿ ಜನರ ನಡುವೆಯೇ ಪಾದರಕ್ಷೆಯನ್ನು ತೊರೆದು ದೂರದಲ್ಲಿ ನಿಂತು ಗಮನಿಸುತ್ತಿದ್ದ. ಇಂತಹ ಕೃತ್ಯವನ್ನು ನಾನು ಈ ಹಿಂದೆಂದೂ ನೋಡಿಲ್ಲ” ಎಂದು ಪೊಲೀಸ್ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.
ಇಷ್ಟೇ ಅಲ್ಲದೆ ಬೈಜು ಕ್ಯಾಮರಾ ಇರುವ ಮತ್ತೊಂದು ಫೋನನ್ನು ಕೂಡ ತನ್ನ ಜೊತೆಗೆ ಒಯ್ದಿದ್ದ. ಒಂದು ಮೊಬೈಲ್ ನ ಬ್ಯಾಟರಿ ಖಾಲಿಯಾದರೆ ಇನ್ನೊಂದನ್ನು ಪಾದರಕ್ಷೆಯೊಳಗೆ ಇರಿಸುವುದು ಈತನ ಯೋಜನೆಯಾಗಿತ್ತು. ಆತನ ಅನುಮಾನಾಸ್ಪದ ನಡೆಯನ್ನು ಆರಂಭದಲ್ಲೇ ಗಮನಿಸಿದ್ದ ಪೊಲೀಸರು ಆತ ಏನೇನೆಲ್ಲಾ ಮಾಡುತ್ತಾನೆ ಎಂದು ವೀಕ್ಷಿಸುತ್ತಿದ್ದರು. ಕೊನೆಗೂ ಆತನನ್ನು ಬಂಧಿಸಿದ್ದು, ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.