ಹಿರಿಯ ಬಿಜೆಪಿ ನಾಯಕ ಯಶವಂತ್ ಸಿನ್ಹಾರಿಗೆ ಪ್ರಧಾನಿ ಭೇಟಿಗೆ ಅವಕಾಶವಿಲ್ಲ !

ಜಬಲ್ಪುರ, ಜ.11: ಪ್ರಧಾನಿ ಭೇಟಿಯಾಗಲು ಅವಕಾಶ ದೊರಕದ ಹಿನ್ನೆಲೆಯಲ್ಲಿ, ಇನ್ನು ಸರಕಾರದ ಯಾವುದೇ ಪ್ರತಿನಿಧಿಯನ್ನು ಭೇಟಿಯಾಗದಿರಲು ಹಾಗೂ ತನ್ನ ಅಭಿಪ್ರಾಯಗಳನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಲು ನಿರ್ಧರಿಸಿರುವುದಾಗಿ ಹಿರಿಯ ಬಿಜೆಪಿ ಮುಖಂಡ ಯಶವಂತ್ ಸಿನ್ಹಾ ತಿಳಿಸಿದ್ದಾರೆ.
ಅಟಲ್ ಜಿ ಮತ್ತು ಅಡ್ವಾಣಿಯವರ ಕಾಲದಲ್ಲಿ ಇದ್ದ ಬಿಜೆಪಿಗೂ ಈಗಿನ ಬಿಜೆಪಿಗೂ ಸಾಕಷ್ಟು ವ್ಯತ್ಯಾಸವಿದೆ. ಅಂದಿನ ದಿನದಲ್ಲಿ ಸಾಮಾನ್ಯ ಕಾರ್ಯಕರ್ತರೂ ದಿಲ್ಲಿಗೆ ತೆರಳಿ ಯಾವುದೇ ತಡೆಯಿಲ್ಲದೆ ಪಕ್ಷದ ಅಧ್ಯಕ್ಷ ಅಡ್ವಾಣಿಯವರನ್ನು ಭೇಟಿಯಾಗಲು ಸಾಧ್ಯವಿತ್ತು. ಆದರೆ ಈಗ ಹಿರಿಯ ಮತ್ತು ಪ್ರಮುಖ ಮುಖಂಡರು ಕೂಡಾ ಪಕ್ಷಾಧ್ಯಕ್ಷರನ್ನು ಭೇಟಿಯಾಗಬೇಕಿದ್ದರೆ ಸಮಯವನ್ನು ಪೂರ್ವ ನಿಗದಿ(ಅಪಾಯಿಂಟ್ಮೆಂಟ್) ಗೊಳಿಸಬೇಕಿದೆ. ಆದ್ದರಿಂದ ಕಳೆದ 13 ತಿಂಗಳಿಂದ ಪ್ರಯತ್ನಿಸುತ್ತಿದ್ದರೂ ನನಗೆ ಅಪಾಯಿಂಟ್ಮೆಂಟ್ ದೊರಕದಿರುವ ಬಗ್ಗೆ ಆಶ್ಚರ್ಯವಾಗಲಿಲ್ಲ ಎಂದು ಸುದ್ದಿಗಾರರ ಜೊತೆ ಮಾತನಾಡಿದ ಯಶವಂತ್ ಸಿನ್ಹಾ ಹೇಳಿದರು.
ಹಲವು ವಿಷಯಗಳ ಬಗ್ಗೆ ಚರ್ಚಿಸಲು ಪ್ರಧಾನಿ ಮೋದಿಯವರನ್ನು ಭೇಟಿಯಾಗಲು 13 ತಿಂಗಳಿಂದ ಪ್ರಯತ್ನಿಸುತ್ತಿದ್ದೇನೆ. ಆದರೆ ಇದುವರೆಗೂ ಅವಕಾಶ ದೊರೆತಿಲ್ಲ. ಆದ್ದರಿಂದ ಇನ್ನು ಸರಕಾರದ ಯಾವ ಪ್ರತಿನಿಧಿಯನ್ನೂ ಭೇಟಿಯಾಗದಿರಲು ನಿರ್ಧರಿಸಿದ್ದೇನೆ. ನನಗೆ ಹೇಳಬೇಕೆಂದಿರುವುದನ್ನು ಸಾರ್ವಜನಿಕವಾಗಿ ಹೇಳುತ್ತೇನೆ ಎಂದು ಸಿನ್ಹಾ ಹೇಳಿದರು.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪ್ರಧಾನಿ ಮೋದಿಗೆ ಸಿಹಿ ತಿನ್ನಿಸುತ್ತಿರುವ ಫೋಟೋವನ್ನು ಉಲ್ಲೇಖಿಸಿದ ಸಿನ್ಹಾ, ಆ ಚಿತ್ರದಲ್ಲಿ ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್, ಅನಂತ್ ಕುಮಾರ್ ಹಾಗೂ ಇತರರನ್ನು ಕಾಣಬಹುದು. ಆದರೆ ಅಡ್ವಾಣಿ ಹಿಂದಿನ ಸಾಲಿನಲ್ಲೂ ಕಾಣಿಸಿಕೊಂಡಿಲ್ಲ. ಒಂದು ಕಾಲದಲ್ಲಿ ಬಿಜೆಪಿಯ ಅತ್ಯಂತ ಪ್ರಮುಖ ನಾಯಕರೆನಿಸಿಕೊಂಡಿದ್ದ ಅಡ್ವಾಣಿ ಈಗ ಸಾಮಾನ್ಯರಾಗಿ ಬಿಟ್ಟಿರುವುದನ್ನು ಇದು ತೋರಿಸುತ್ತದೆ ಎಂದರು. ವಿಪಕ್ಷದಲ್ಲಿದ್ದಾಗ ವಿರೋಧಿಸುತ್ತಿದ್ದ ವಿಷಯಗಳನ್ನು ಅಧಿಕಾರಕ್ಕೆ ಬಂದಾಗ ಬಿಜೆಪಿ ಸ್ವೀಕರಿಸಿದೆ ಎಂದ ಅವರು, ದೇಶದಲ್ಲಿ ರೈತರನ್ನು ಕಡೆಗಣಿಸಲಾಗುತ್ತಿದೆ. ಮಧ್ಯಪ್ರದೇಶದಲ್ಲೂ ಅವರ ಪರಿಸ್ಥಿತಿ ಉತ್ತಮವಾಗಿಲ್ಲ ಎಂದರು. ಕೃಷಿಯಲ್ಲಿ ಮಾಡಿದ ಸಾಧನೆಗಾಗಿ ಬಿಜೆಪಿ ಆಡಳಿತದ ಮಧ್ಯಪ್ರದೇಶಕ್ಕೆ ಪುರಸ್ಕಾರ ಸಂದಿರುವ ಬಗ್ಗೆ ಉತ್ತರಿಸಿದ ಸಿನ್ಹ, ಈ ಪುರಸ್ಕಾರವನ್ನು ವಾಸ್ತವಾಂಶವನ್ನು ಪರಿಗಣಿಸದೆ ಕೇವಲ ಅಂಕಿಅಂಶದ ಆಧಾರದಲ್ಲಿ ನೀಡಲಾಗಿದೆ. ಇಂತಹ ಹಲವು ವಿಷಯಗಳನ್ನು ನನ್ನ ಬದುಕಿನಲ್ಲಿ ಕಂಡಿದ್ದೇನೆ ಎಂದರು.
ಮಧ್ಯಪ್ರದೇಶ ಸರಕಾರದ ‘ಭಾವಾಂತರ ಯೋಜನೆ’ ( ಕನಿಷ್ಟ ಬೆಂಬಲ ಬೆಲೆ ಹಾಗೂ ಮಾರುಕಟ್ಟೆ ದರದ ವ್ಯತ್ಯಾಸವನ್ನು ರೈತರಿಗೆ ನೀಡುವುದು ಹಾಗೂ ಬೆಳೆ ವಿಮೆ ಯೋಜನೆ) ಕೇವಲ ‘ಗಿಮಿಕ್’ ಮಾತ್ರ ಎಂದು ಸಿನ್ಹಾ ಟೀಕಿಸಿದರು.