ವರ್ಚುವಲ್ ಐಡಿ ಕಾರ್ಯ ನಿರ್ವಹಿಸದು: ದೂರುದಾರರು

ಹೊಸದಿಲ್ಲಿ, ಜ. 11: ಆಧಾರ್ ಮಾಹಿತಿ ಸಂರಕ್ಷಿಸುವ ಕ್ರಮವಾಗಿ ಬಯೋಮೆಟ್ರಿಕ್ ಐಡಿ ಬದಲು 16 ಅಂಕಿಗಳ ತಾತ್ಕಾಲಿಕ ಸಂಖ್ಯೆ ಬಳಸುವುದನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ವಿರೋಧಿಸಲಾಗುವುದು ಎಂದು ಆಧಾರ್ ವ್ಯವಸ್ಥೆ ವಿರುದ್ಧ ಕಾನೂನು ಹೋರಾಟ ನಡೆಸುತ್ತಿರುವ ದೂರುದಾರರು ತಿಳಿಸಿದ್ದಾರೆ.
ನೂತನ ವರ್ಚುವಲ್ ಐಡಿಯ ಪರೀಕ್ಷೆ ನಡೆಸಿಲ್ಲ ಹಾಗೂ ಅದು ಕಾರ್ಯ ನಿರ್ವಹಿಸಲಾರದು. ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ (ಯುಐಡಿಎಐ) ಪರೀಕ್ಷೆಗೆ ಒಳಪಡಿಸದ ತಂತ್ರಜ್ಞಾನದ ಮೂಲಕ ತಾಂತ್ರಿಕ ಸಮಸ್ಯೆ ಸರಿಪಡಿಸಲು ಪ್ರಯತ್ನಿಸುತ್ತಿದೆ. ಆಧಾರ್ ಕುರಿತು ಮುಂದಿನ ವಾರ ನಡೆಯಲಿರುವ ವಿಚಾರಣೆ ವೇಳೆ ಇದನ್ನು ಖಂಡತುಂಡವಾಗಿ ವಿರೋಧಿಸಲಿದ್ದೇವೆ ಎಂದು ದೂರುದಾರರು ಹೇಳಿದ್ದಾರೆ.
12 ಅಂಕಿಗಳ ವಿಶಿಷ್ಟ ಗುರುತಿನ ಸಂಖ್ಯೆಯ ಸಿಂಧುತ್ವ ಹಾಗೂ ಸರಕಾರ ಆಧಾರ್ ಅನ್ನು ಕಡ್ಡಾಯಗೊಳಿಸಿರುವುದನ್ನು ಪ್ರಶ್ನಿಸಿ ದೂರುದಾರರು ಸಲ್ಲಿಸಿದ ಮನವಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯ ನಡೆಸುತ್ತಿದೆ.
ಕೋಟ್ಯಂತರ ಭಾರತೀಯರಿಂದ ಸಂಗ್ರಹಿಸಲಾದ ಬಯೋಮೆಟ್ರಿಕ್ ದತ್ತಾಂಶ ಸೋರಿಕೆ ಹಾಗೂ ದುರ್ಬಳಕೆ ಆಗುವುದನ್ನು ತಡೆಯಲು ವರ್ಚುವಲ್ ಐಡಿ ಪರಿಚಯಿಸುವುದಾಗಿ ಯುಐಡಿಎಐ ಗುರುವಾರ ಘೋಷಿಸಿತ್ತು. 500 ರೂ. ಪಾವತಿ ಮಾಡಿದರೆ ಆಧಾರ್ ವಿವರ ಪಡೆಯಬಹುದು ಎಂದು ಪ್ರತಿಪಾದಿಸಿ ದಿನಪತ್ರಿಕೆಯೊಂದು ವರದಿ ಪ್ರಕಟಿಸಿದ ಬಳಿಕ ಯುಐಡಿಎಐ ಈ ವರ್ಚುವಲ್ ಐಡಿ ಪರಿಚಯಿಸುವುದಾಗಿ ಘೋಷಿಸಿದೆ.
ಮಾರ್ಚ್ 1ರಿಂದ ವರ್ಚುವಲ್ ಐಡಿ ಸಾಫ್ಟ್ ವೇರ್ ಬಿಡುಗಡೆ ಮಾಡಲಾಗುವುದು. ಏರ್ಲೈನ್ಸ್, ರೈಲ್ವೆ ಕೌಂಟರ್ ಸೇರಿದಂತೆ ವಿವಿಧ ಸೇವೆಗಳಿಗೆ ಆಧಾರ್ ಸಂಖ್ಯೆಯ ಬದಲು 16 ಅಂಕಿಗಳ ತಾತ್ಕಾಲಿಕ ಸಂಖ್ಯೆ ಬಳಸಬಹುದು ಎಂದು ಯುಐಡಿಎಐ ತಿಳಿಸಿತ್ತು.