ಹಿಮಾಚಲದ ಆರೋಗ್ಯ ಕಾರ್ಯಕರ್ತೆಗೆ ಸಿಕ್ಕಿದ ದೊಡ್ಡ ಗೌರವ ಏನು ?

ಡಬ್ಲ್ಯುಎಚ್ಒ ಕ್ಯಾಲೆಂಡರ್ನಲ್ಲಿ ಗೀತಾ ವರ್ಮಾ
ಶಿಮ್ಲಾ, ಜ. 12: ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಆರೋಗ್ಯ ಕಾರ್ಯಕರ್ತೆ ಗೀತಾ ವರ್ಮಾ ಕಳೆದ ಸೆಪ್ಟೆಂಬರ್ನಲ್ಲಿ ಸೆರಜ್ ಕಣಿವೆಯ ತಗ್ಗು ದಿಣ್ಣೆಗಳ ರಸ್ತೆಯಲ್ಲಿ ಸಿಡುಬು ಹಾಗೂ ರುಬೆಲ್ಲಾ ಲಸಿಕೆಯ ಪೆಟ್ಟಿಗೆಯನ್ನು ಮೋಟರ್ ಸೈಕಲ್ನಲ್ಲಿ ಒಯ್ಯುವ ಮೂಲಕ ಸುದ್ದಿ ಮಾಡಿದ್ದರು.
ಇದೀಗ ಆಕೆಯ ಸಾಧನೆಗೆ ಜಾಗತಿಕ ಮನ್ನಣೆ ದೊರಕಿದೆ. ವಿಶ್ವ ಆರೋಗ್ಯ ಸಂಸ್ಥೆ 2018ರ ಕ್ಯಾಲೆಂಡರ್ನಲ್ಲಿ ಆಕೆಯ ಚಿತ್ರ- ವಿವರಗಳನ್ನು ಪ್ರಕಟಿಸುವ ಮೂಲಕ ಅತಿದೊಡ್ಡ ಗೌರವ ಸಲ್ಲಿಸಿದೆ ಎಂದು ರಾಜ್ಯ ಸರ್ಕಾರ ಪ್ರಕಟಿಸಿದೆ.
"ಗೀತಾ ವರ್ಮಾ ಅವರ ಸಾಧನೆ ಅಭಿನಂದನೀಯ. ಡಬ್ಲ್ಯುಎಚ್ಒ ಕ್ಯಾಲೆಂಡರ್ನಲ್ಲಿ ಕಾಣಿಸಿಕೊಳ್ಳುವ ಮೂಲಕ ಇಡೀ ರಾಜ್ಯವೇ ಹೆಮ್ಮೆಪಡುವ ಸಾಧನೆ ಮಾಡಿದ್ದಾರೆ" ಎಂದು ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅಭಿನಂದಿಸಿದ್ದಾರೆ.
ಸಿಡುಬು ಮತ್ತು ರುಬೆಲ್ಲಾ ಲಸಿಕೆ ನೀಡಿಕೆಯಲ್ಲಿ ಶೇಕಡ 100 ಸಾಧನೆ ಮಾಡಿದ್ದ ಕರ್ಸೋಗ್ ತಾಲೂಕು ಸಪ್ನೋಟ್ ಗ್ರಾಮದವರಾದ ಗೀತಾ ಅವರನ್ನು ಮುಖ್ಯಮಂತ್ರಿ ಸನ್ಮಾನಿಸಿದ್ದರು.
ಕಣಿವೆಯಲ್ಲಿ ಮೋಟರ್ ಸೈಕಲ್ ಸವಾರಿ ಮಾಡಿಕೊಂಡು ಲಸಿಕೆ ಒಯ್ಯುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಗುಡ್ಡಗಾಡು ಪ್ರದೇಶವಾದ ರಾಯಗಢದಲ್ಲಿ ತಾತ್ಕಾಲಿಕ ಶಿಬಿರಗಳಲ್ಲಿ ವಾಸವಿದ್ದ ಗುರ್ಜಾರ್ ಸಮುದಾಯದ ಕುರಿಗಾಹಿಗಳಿಗೆ ಲಸಿಕೆ ಪೂರೈಸಿದ್ದರು.
ಉದ್ಯೋಗಿಗಳು ತಮ್ಮ ಕೆಲಸದ ಬಗ್ಗೆ ಇಂಥ ಬದ್ಧತೆ ಹೊಂದಿರಬೇಕು ಹಾಗೂ ಪ್ರಾಮಾಣಿಕವಾಗಿ ಜನಸೇವೆ ಮಾಡಬೇಕು. ಆಕೆ ಇಡೀ ನಮ್ಮ ರಾಜ್ಯ ಹೆಮ್ಮೆಪಡುವಂತೆ ಮಾಡಿದ್ದಾರೆ ಎಂದು ಜೈರಾಮ್ ಠಾಕೂರ್ ಬಣ್ಣಿಸಿದ್ದಾರೆ.