ಸ್ವಘೋಷಿತ ದೇವಮಾನವನಿಂದ ಲೈಂಗಿಕ ದೌರ್ಜನ್ಯ : ಯುವಕನಿಂದ ದೂರು

ಜೈಪುರ್,ಜ.12: ಯುವಕನೊಬ್ಬನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಎದುರಿಸುತ್ತಿರುವ ನಗೌರ್ ಎಂಬಲ್ಲಿನ 75 ವರ್ಷದ ಸ್ವಘೋಷಿತ ದೇವಮಾನವನೊಬ್ಬನಿಗಾಗಿ ಉದಯಪುರ ಪೊಲೀಸರು ಶೋಧಿಸುತ್ತಿದ್ದಾರೆ. ಕಳೆದೊಂದು ವರ್ಷದಿಂದ ಮಹಂತ್ ರಾಮಶರಣದಾಸ್ ಎಂಬ ಹೆಸರಿನ ಆ 'ದೇವಮಾನವ' ತನ್ನೊಂದಿಗೆ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಹಾಗೂ ತನ್ನನ್ನು ಸುಲಿಗೆ ಮಾಡುತ್ತಿದ್ದ ಎಂದು ಯುವಕ ತನ್ನ ದೂರಿನಲ್ಲಿ ಆರೋಪಿಸಿದ್ದಾನೆ. ಸಾಮಾಜಿಕ ಜಾಲತಾಣ ಫೇಸ್ಬುಕ್ ಮುಖಾಂತರ ಆರೋಪಿಯು ಯುವಕನೊಂದಿಗೆ ಸಂಪರ್ಕ ಬೆಳೆಸಿದ್ದ ಎಂದು ಸಂತ್ರಸ್ತ ತನ್ನ ತಾಯಿಯೊಂದಿಗೆ ಠಾಣೆಗೆ ಬಂದು ನೀಡಿದ ದೂರಿನಲ್ಲಿ ತಿಳಿಸಿದ್ದಾನೆ.
ಆರೋಪಿಯು ಯುವಕನ ದೇಹದ ಕೂದಲುಗಳನ್ನು ಬಲವಂತವಾಗಿ ಶೇವ್ ಮಾಡಿಸಿದ್ದ, ಆತನ ಕಿವಿ ಚುಚ್ಚಿಸಿ ಕಿವಿಯೋಲೆ ಧರಿಸುವಂತೆ ಮಾಡಿದ್ದನಲ್ಲದೆ ಆತ ನೈಲ್ ಪಾಲಿಶ್ ಹಾಕುವಂತೆಯೂ ಮಾಡಿದ್ದ. ಆತನ ಜತೆ ನಡೆಸಿದ ಅನೈಸರ್ಗಿಕ ಲೈಂಗಿಕ ಕ್ರಿಯೆಯ ವೀಡಿಯೋವೊಂದನ್ನು ಬಳಸಿಕೊಂಡು ಸಂತ್ರಸ್ತನನ್ನು ಮಹಂತ ಬ್ಲ್ಯಾಕ್ಮೇಲ್ ಗೊಳಿಸುತ್ತಿದ್ದ ಎಂದೂ ದೂರಲಾಗಿದೆ. ಪೊಲೀಸರು ಲಡರಿಯಾ ಗ್ರಾಮದಲ್ಲಿರುವ ದೇವಮಾನವನ ಮನ್ದಾಸ್ ಕಿ ಬಗೀಚಿ ಎಂಬ ಆಶ್ರಮಕ್ಕೆ ದಾಳಿ ನಡೆಸಿದರೂ ಅಲ್ಲಿ ಆತನಿರಲಿಲ್ಲ.
ಇನ್ನೊಬ್ಬ 'ದೇವಮಾನವ'ನ ವಿರುದ್ಧ ದೂರು : ಜೈಪುರದ ಸಂತೋಶಿ ಮಾತಾ ದೇವಳದಲ್ಲಿರುವ ಇನ್ನೊಬ್ಬ ಸ್ವಘೋಷಿತ ದೇವಮಾನವ ಅವದೇಶ್ ಮಹಾರಾಜ್ ವಿರುದ್ಧವೂ ಇಂತಹುದೇ ಆರೋಪವನ್ನು ಹೊರಿಸಿ 37 ವರ್ಷದ ವ್ಯಕ್ತಿಯೊಬ್ಬ ಪೊಲೀಸ್ ದೂರು ನೀಡಿದ್ದಾನೆ.