ಗುಜರಾತ್ ನಲ್ಲಿ 'ಪದ್ಮಾವತ್' ಬಿಡುಗಡೆಯಿಲ್ಲ : ಸಿಎಂ ರೂಪಾನಿ

ಹೊಸದಿಲ್ಲಿ,ಜ.12 : ಕೇಂದ್ರ ಸೆನ್ಸಾರ್ ಮಂಡಳಿಯಿಂದ ಹಸಿರು ನಿಶಾನೆ ದೊರೆತಿರುವ ಹೊರತಾಗಿಯೂ ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ವಿವಾದಿತ ಚಲನಚಿತ್ರ 'ಪದ್ಮಾವತ್' ಗುಜರಾತ್ ರಾಜ್ಯದಲ್ಲಿ ಬಿಡುಗಡೆಗೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ವಿಜಯ್ ರೂಪಾನಿ ಹೇಳಿದ್ದಾರೆ.
ರಾಜಸ್ಥಾನದ ನಂತರ ಈ ಚಿತ್ರವನ್ನು ನಿಷೇಧಿಸಿರುವ ಎರಡನೇ ರಾಜ್ಯ ಗುಜರಾತ್ ಆಗಿದೆ. ಈ ಚಿತ್ರವನ್ನು ಬಿಡುಗಡೆಗೊಳಿಸಲು ಬಿಡುವುದಿಲ್ಲ ಎಂದು ನವೆಂಬರ್ ತಿಂಗಳಲ್ಲಿ ಹೇಳಿದ್ದ ಮಧ್ಯ ಪ್ರದೇಶ, ಉತ್ತರ ಪ್ರದೇಶ ಹಾಗೂ ಹರ್ಯಾಣ ರಾಜ್ಯಗಳು ತಮ್ಮ ನಿರ್ಧಾರವನ್ನು ಇನ್ನೂ ಪ್ರಕಟಿಸಿಲ್ಲ.
ಸೂಫಿ ಕವಿ ಮಲಿಕ್ ಮುಹಮ್ಮದ್ ಜಯಸಿ ಎಂಬಾತ 1540ರಲ್ಲಿ ಬರೆದಿದ್ದ ಅವಧಿ ಭಾಷೆಯ ಕವನ 'ಪದ್ಮಾವತ್' ಆಧರಿಸಿ 13ನೇ ಶತಮಾನದ ರಜಪೂತ ರಾಣಿ ಪದ್ಮಿನಿಯ ಜೀವನ ಕಥೆಯನ್ನು ಭನ್ಸಾಲಿ ತಮ್ಮ ಚಲನಚಿತ್ರದಲ್ಲಿ ಬಿಂಬಿಸಿದ್ದಾರೆ. ಆದರೆ ಇತಿಹಾಸವನ್ನು ತಿರುಚಲಾಗಿದೆ ಎಂದು ಆರೋಪಿಸಿ ರಜಪೂತ ಸಂಘಟನೆಗಳು ಚಿತ್ರ ಬಿಡುಗಡೆಗೊಳಿಸಬಾರದೆಂದು ಪಟ್ಟು ಹಿಡಿದು ಹಲವಾರು ಪ್ರತಿಭಟನೆಗಳನ್ನು ನಡೆಸಿತ್ತಲ್ಲದೆ ಚಿತ್ರ ನಿರ್ದೇಶಕರು ಹಾಗೂ ನಟರಿಗೆ ಬೆದರಿಕೆಯನ್ನೂ ಒಡ್ಡಿದ್ದವು.
ಸೆನ್ಸಾರ್ ಮಂಡಳಿಯು ಚಿತ್ರದಲ್ಲಿ ಐದು ಬದಲಾವಣೆಗಳನ್ನು ಮಾಡುವಂತೆ ಶಿಫಾರಸು ಮಾಡಿದ್ದು, ಚಿತ್ರದ ಶೀರ್ಷಿಕೆಯನ್ನು 'ಪದ್ಮಾವತ್' ಎಂದು ಬದಲಿಸುವುದು ಅದರಲ್ಲೊಂದಾಗಿದೆ.