ಕಚೇರಿ ಆವರಣ ಗೋಡೆಯ ಕೇಸರಿ ಬಣ್ಣ ಬದಲಿಸಿದ್ದಕ್ಕೆ ಹಜ್ ಸಮಿತಿಗೆ ನೋಟಿಸ್!

ಫೈಲ್ ಫೋಟೊ
ಲಕ್ನೋ, ಜ.15: ಉತ್ತರ ಪ್ರದೇಶ ಹಜ್ ಸಮಿತಿ ಕಚೇರಿ ಆವರಣ ಗೋಡೆಗೆ ಹಾಲಿ ಇದ್ದ ಕೇಸರಿ ಬಣ್ಣವನ್ನು ಕೆನೆಬಣ್ಣಕ್ಕೆ ಬದಲಿಸಿದ ಕ್ರಮವನ್ನು ಪ್ರಶ್ನಿಸಿ ಹಜ್ ಸಚಿವ ಮೊಹ್ಸಿನ್ ರಝಾ ಅವರು ಹಜ್ ಸಮಿತಿಗೆ ನೋಟಿಸ್ ನೀಡಿದ್ದಾರೆ.
ಈ ನಿರ್ಧಾರ ಕೈಗೊಂಡು ಒಂದು ವಾರದ ಬಳಿಕ ಸಚಿವರು ಹಜ್ ಸಮಿತಿಯ ಕಾರ್ಯದರ್ಶಿ ಆರ್.ಪಿ.ಸಿಂಗ್ ಅವರಿಗೆ ನೋಟಿಸ್ ನೀಡಿ ವಿವರಣೆ ಕೇಳಿದ್ದಾರೆ. ಕೇಸರಿ ಬಣ್ಣದಿಂದ ಕೆನೆ ಬಣ್ಣಕ್ಕೆ ಬದಲಿಸಲು ಯಾರು ಅನುಮತಿ ನೀಡಿದ್ದಾರೆ ಎಂದು ಸಚಿವರು ಪ್ರಶ್ನಿಸಿದ್ದಾರೆ. ಮರು ಬಣ್ಣ ನೀಡಿರುವುದು ಉದ್ದೇಶಪೂರ್ವಕವಲ್ಲದ ತಪ್ಪು ಎಂದು ಆರ್.ಪಿ.ಸಿಂಗ್ ಪತ್ರಿಕಾ ಹೇಳಿಕೆ ನೀಡಿರುವುದನ್ನೂ ಸಚಿವರು ಪ್ರಸ್ನಿಸಿದ್ದಾರೆ.
ಯಾರ ಆದೇಶದಂತೆ ಕೇಸರಿ ಬಣ್ಣವನ್ನು ಆವರಣಗೋಡೆಗೆ ನೀಡಲಾಗಿದೆ ಹಾಗೂ ನಂತರ ಕೆನೆಬಣ್ಣಕ್ಕೆ ಅದನ್ನು ಬದಲಿಸಲು ಸೂಚಿಸಿದವರು ಯಾರು? ಯಾವ ನಿಯಮಾವಳಿಯನ್ವಯ ಬಿಳಿ ಅಥವಾ ಇತರ ಬಣ್ಣ ಬಳಿಯಲಾಗುತ್ತಿದೆ? ಆವರಣ ಗೋಡೆಗೆ ಮರು ಬಣ್ಣ ಹಚ್ಚಲು ಯಾರು ಕಾರಣ? ಈ ಕ್ರಮದಿಂದ ಆದ ವೆಚ್ಚವನ್ನು ಯಾರು ಭರಿಸುತ್ತಾರೆ ಮತ್ತು ಸಂಬಂಧಪಟ್ಟ ಗುತ್ತಿಗೆದಾರನ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತೀರಿ ಎಂದು ಏಳು ಪ್ರಶ್ನೆಗಳನ್ನು ಕೇಳಿ ನೋಟಿಸ್ ನೀಡಲಾಗಿದೆ.
ಈ ಕಾಮಗಾರಿಗೆ ನೀಡಿರುವ ಟೆಂಡರ್ ಬಗೆಗಿನ ಸಮಗ್ರ ಮಾಹಿತಿ, ಕೆಲಸದ ಮೇಲುಸ್ತುವಾರಿ ನಡೆಸಿದ ದಿನಾಂಕ ಹಾಗೂ ವೇಳೆ ಮತ್ತಿತರ ವಿವರಗಳನ್ನು ನೀಡುವಂತೆಯೂ ಸೂಚಿಸಲಾಗಿದೆ. ವಿಧಾನಸೌಧ ರಸ್ತೆಯಲ್ಲಿರುವ ಹಜ್ ಸಮಿತಿ ಕಚೇರಿಯ ಆವರಣ ಗೋಡೆಗೆ ಕೇಸರಿ ಬಣ್ಣವನ್ನು ಜನವರಿ 5ರಂದು ನೀಡಲಾಗಿತ್ತು. ಸಾಮಾನ್ಯವಾಗಿ ಇದಕ್ಕೆ ಬಿಳಿ ಬಣ್ಣ ಇರುತ್ತದೆ. ಈ ಕ್ರಮಕ್ಕೆ ಎಲ್ಲೆಡೆಯಿಂದ ಟೀಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಮರುದಿನವೇ ಕೇಸರಿ ಬಣ್ಣವನ್ನು ಬದಲಿಸಿ ಕೆನೆಬಣ್ಣವನ್ನು ಬಳಿಯಲಾಗಿತ್ತು.
ಆದಿತ್ಯನಾಥ್ ಸರ್ಕಾರದಲ್ಲಿ ಇರುವ ಏಕೈಕ ಮುಸ್ಲಿಂ ಸಚಿವರಾಗಿರುವ ರಝಾ ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದು, ಕೇಸರಿ ಬಣ್ಣ ದೇವರ ಉಡುಗೊರೆ. ಇದು ಸಂತಸದ ಬಣ್ಣ; ಸೂರ್ಯೋದಯದ ಬಣ್ಣ. ಇದು ಇಡೀ ವಿಶ್ವಕ್ಕೆ ಬೆಳಕು ನೀಡುವಂಥದ್ದು ಎಂದು ಬಣ್ಣಿಸಿದ್ದಾರೆ. ಈ ಬಣ್ಣವನ್ನು ವಿರೋಧಿಸುವವರು ರಾಷ್ಟ್ರದ್ವಜವನ್ನೂ ವಿರೋಧಿಸುತ್ತಾರೆಯೇ? ಇದು ಸರ್ಕಾರಿ ಕಚೇರಿ. ಅಲ್ಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರ್ಧರಿಸಿದ ಬಣ್ಣವನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ.