ಲೋಯಾ ಸಾವು ಪ್ರಕರಣ: 'ಪುತ್ರ ಅನುಜ್ ಮೇಲೆ ಒತ್ತಡವಿದ್ದಿರಬಹುದು’
ಸಾವಿನ ತನಿಖೆ ನಡೆಯಲೇಬೇಕು: ಲೋಯಾ ದೊಡ್ಡಪ್ಪ ಶ್ರೀನಿವಾಸ್ ಒತ್ತಾಯ

ಹೊಸದಿಲ್ಲಿ, ಜ.15: ಸಿಬಿಐ ವಿಶೇಷ ನ್ಯಾಯಾಧೀಶ ಬೃಜ್ ಗೋಪಾಲ್ ಹರಕಿಶನ್ ಲೋಯಾ ಅವರ ಶಂಕಾಸ್ಪದ ಸಾವು ಪ್ರಕರಣದ ಸುತ್ತಮುತ್ತಲಿನ ಘಟನೆಗಳು ಪ್ರತೀದಿನ ಹೊಸ ತಿರುವು ಪಡೆದುಕೊಳ್ಳುತ್ತಿದೆ. ರವಿವಾರ ಲೋಯಾ ಅವರ 21 ವರ್ಷದ ಪುತ್ರ ಅನುಜ್ ಲೋಯಾ ಪತ್ರಿಕಾಗೋಷ್ಠಿಯೊಂದನ್ನುದ್ದೇಶಿಸಿ ಮಾತನಾಡಿ, ತಮ್ಮ ಕುಟುಂಬಕ್ಕೆ ತಂದೆಯ ಸಾವಿನ ವಿಚಾರದ ಕುರಿತಾಗಿ ಕಿರುಕುಳ ನೀಡದಂತೆ ಹಾಗೂ ತಮ್ಮ ತಂದೆ ಸಹಜ ಸಾವನ್ನಪ್ಪಿದ್ದಾರೆಂಬ ವಿಚಾರದಲ್ಲಿ ತಮಗೆ ಸಂಶಯವಿಲ್ಲ ಎಂದು ಹೇಳಿದ್ದರೆ, ನ್ಯಾಯಾಧೀಶ ಲೋಯಾ ಅವರ 81 ವರ್ಷದ ದೊಡ್ಡಪ್ಪ ಶ್ರೀನಿವಾಸ್ ಲೋಯಾ ಸಂಪೂರ್ಣವಾಗಿ ತದ್ವಿರುದ್ಧವಾಗಿರುವುದನ್ನೇ ಹೇಳಿದ್ದಾರೆ.
ರವಿವಾರ ರಾತ್ರಿ ದಿ ಕ್ಯಾರವಾನ್ ಮ್ಯಾಗಝಿನ್ ಜತೆ ಮಾತನಾಡಿದ ಶ್ರೀನಿವಾಸ್ ಲೋಯಾ, ‘‘ಹರಕಿಶನ್ ಲೋಯಾ ಅವರ ಪುತ್ರ ಅನುಜ್ ಬಹಳ ಚಿಕ್ಕವನು ಹಾಗೂ ಒತ್ತಡದಲ್ಲಿರುವ ಸಾಧ್ಯತೆಯಿದೆ’’ ಎಂದಿದ್ದಾರೆ.
ಡಿಸೆಂಬರ್ 2014ರ ರಾತ್ರಿ ನಾಗ್ಪುರದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆಂದು ಹೇಳಲಾದ ಲೋಯಾ ಅವರ ಸಾವಿನ ಬಗೆ ತನಿಖೆ ನಡೆಸಬೇಕೆಂಬುದು ತಮ್ಮ ಇಚ್ಚೆಯಾಗಿದೆ ಎಂದು ಶ್ರೀನಿವಾಸ್ ಹೇಳಿದ್ದಾರೆ.
ಲೋಯಾ ಪುತ್ರ ಅನುಜ್ ಪತ್ರಿಕಾಗೋಷ್ಠಿಯಲ್ಲಿ ತನ್ನ ತೊಡೆಯ ಮೇಲಿರಿಸಿದ ಕಾಗದದಲ್ಲಿ ಬರೆದಿದ್ದನ್ನು ಓದಿರುವ ಬಗ್ಗೆ ಉಲ್ಲೇಖಿಸಿದಾಗ ಶ್ರನಿವಾಸ್ ‘‘ನಾನೇನು ಹೇಳಲಿ ? ಆತನಿಗೆ ಈಗಷ್ಟೇ 18 ವರ್ಷ ಕಳೆದಿದೆ. ಆತನ ಮೇಲೆ ಒತ್ತಡವಿದ್ದಿರಬಹುದು’’ ಎಂದರು.
‘‘ಅನುಜ್ ಈ ಹಿಂದೆ ನೀಡಿದ್ದ ಹೇಳಿಕೆಯನ್ನು ಪರಿಗಣಿಸಿದ್ದರೆ ಆತ ತನಿಖೆ ಬಯಸಿದ್ದ’’ ಎಂದು ಹೇಳಿದ ಶ್ರೀನಿವಾಸ್, ‘‘ತನಿಖೆ ನಡೆಯಲೇಬೇಕಿದೆ. ಒಬ್ಬ ಸಂಬಂಧಿಕನಲ್ಲದೆ ಒಬ್ಬ ನಾಗರಿಕನಾಗಿ ನೀವು ನನ್ನಲ್ಲಿ ಕೇಳಿದರೆ, ಸುಪ್ರೀಂ ಕೋರ್ಟ್ ಮುಂದಿರುವ ಪ್ರಕರಣದ ವಿಚಾರಣೆ ಮುಂದುವರಿಯಬೇಕು. ಇದು ನನ್ನ ವೈಯಕ್ತಿಕ ಅಭಿಪ್ರಾಯ’’ ಎಂದರು. ಈ ಪ್ರಕರಣ ಸುಪ್ರೀಂ ಕೋರ್ಟ್ ಪೀಠದ ಮುಂದೆ ಜನವರಿ 16ರಂದು ವಿಚಾರಣೆಗೆ ಬರಲಿದೆ.
ಲೋಯಾ ಕುಟುಂಬದ ಮೇಲೆ ಯಾರ ಒತ್ತಡವಿರಬಹುದು ಎಂದು ಪ್ರಶ್ನಿಸಿದಾಗ ‘‘ಆತನ ತಾತನಿಗೆ ಈಗ 85, ಆತನ ತಾಯಿ ಇದ್ದಾರೆ. ಲೋಯಾ ಅವರ ಪುತ್ರಿಯ ವಿವಾಹವಿದೆ. ಇದೆಲ್ಲಾ ಒತ್ತಡಕ್ಕೆ ಕಾರಣವಾಗಿರಬಹುದು’’ ಎಂದರು. ಲಾತೂರ್ ನಿವಾಸಿಯಾಗಿರುವ ಶ್ರೀನಿವಾಸ್ ಅವರಿಗೆ ಲೋಯಾ ಕುಟುಂಬ ಎಲ್ಲಿ ವಾಸಿಸುತ್ತಿದೆ ಎಂಬುದು ತಿಳಿದಿಲ್ಲ.
ನ್ಯಾಯಾಧೀಶ ಲೋಯಾ ಅವರ ಆತ್ಮೀಯ ಸ್ನೇಹಿತ ಹಾಗೂ ವಕೀಲ ಬಲವಂತ್ ಜಾಧವ್ ಆವರು ಕ್ಯಾರವಾನ್ ಪತ್ರಿಕೆ ಜತೆ ಮಾತನಾಡುತ್ತಾ ರಾಜಕೀಯ ಒತ್ತಡದ ಬಗ್ಗೆ ತಮಗೆ ಖಚಿತತೆ ಇದೆ ಎಂದಿದ್ದಾರೆ. ‘‘ಇಡೀ ಕುಟುಂಬವನ್ನು ನಾನು ಹಲವು ದಶಕಗಳಿಂದ ಬಲ್ಲೆ. ಅಮಿತ್ ಶಾ ಅವರನ್ನು ಬಚಾವ್ ಮಾಡುವ ಉದ್ದೇಶವಿರುವ ರಾಜಕೀಯ ಒತ್ತಡ ಅವರನ್ನು ಮೌನವಾಗಿಸಿದೆ’’ ಎಂದಿದ್ದಾರೆ.
ಸುಪ್ರೀಂ ಕೋರ್ಟ್ ಸುಪರ್ದಿಯಲ್ಲಿ ನ್ಯಾಯಾಧೀಶ ಲೋಯಾ ಅವರ ಸಾವಿನ ಪ್ರಕರಣದ ತನಿಖೆ ನಡೆಸಬೇಕೆಂದೂ ಜಾಧವ್ ಆಗ್ರಹಿಸಿದ್ದಾರೆ.