ಪ್ರತೀ ಮೂರು ದಿನಕ್ಕೊಬ್ಬ ಭಾರತೀಯ ಸೈನಿಕ ಹುತಾತ್ಮ

ಆಗ್ರಾ, ಜ.16: ಹನ್ನೊಂದು ಲಕ್ಷ ಸೈನಿಕರ ಪ್ರಬಲ ಪಡೆ ಹೊಂದಿರುವ ಭಾರತೀಯ ಸೇನೆ ಕಳೆದ ಹದಿಮೂರು ವರ್ಷಗಳಿಂದ ಪ್ರತೀ ಮೂರು ದಿನಕ್ಕೊಬ್ಬ ಸೈನಿಕರನ್ನು ಕಳೆದುಕೊಳ್ಳುತ್ತಿರುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ.
ಭಾರತೀಯ ಸೇನೆಯ 2005ರಿಂದ 2017ರವರೆಗಿನ ಅಂಕಿ-ಅಂಶಗಳನ್ನು ಪರಿಶೀಲಿಸಿದಾಗ 1,684 ಸೈನಿಕರು ಪಾಕಿಸ್ತಾನದ ಶಾಂತಿ ಒಪ್ಪಂದ ಉಲ್ಲಂಘನೆ, ಭಯೋತ್ಪಾದಕ ವಿರೋಧಿ ಹೋರಾಟ, ಶಾಂತಿಪಾಲನೆ ಮತ್ತು ಆಯಕಟ್ಟಿನ ಕಾರ್ಯಾಚರಣೆಯಲ್ಲಿ ಬಲಿಯಾಗಿರುವುದು ಕಂಡುಬರುತ್ತದೆ.
70ನೇ ಸೇನಾ ದಿನಾಚರಣೆ ಅಂಗವಾಗಿ ಜನವರಿ 15ರಂದು ಬಿಡುಗಡೆ ಮಾಡಲಾದ ಅಂಕಿ-ಅಂಶಗಳ ಪ್ರಕಾರ, 87 ಭಾರತೀಯ ಸೇನಾ ಅಧಿಕಾರಿಗಳು ಮತ್ತು ಸೈನಿಕರು 2017ರಲ್ಲಿ ಅಸುನೀಗಿದ್ದಾರೆ. ಇದರಲ್ಲಿ ಸೇನಾಪಡೆ, ಶಸ್ತ್ರಾಗಾರ, ಎಂಜಿನಿಯರಿಂಗ್, ಸಿಗ್ನಲ್, ಸೇನೆಯ ವಾಯುಸುರಕ್ಷೆ, ಸೇನಾ ಸೇವೆ ಪಡೆ, ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಸಿಬ್ಬಂದಿ ಸೇರಿದ್ದಾರೆ.
ಆದರೆ 2017ರ ಡಿಸೆಂಬರ್ 23ರಂದು ಮೇಜರ್ ಒಬ್ಬರು ಸೇರಿದಂತೆ ನಾಲ್ವರು ವಾಸ್ತವ ನಿಯಂತ್ರಣ ರೇಖೆಯಲ್ಲಿ ಮೃತಪಟ್ಟಿರುವುದನ್ನು ಸೇರಿಸಿದರೆ, ಈ ಸಂಖ್ಯೆ 91 ಆಗುತ್ತದೆ. 2016ರಲ್ಲಿ 86 ಮಂದಿ ಹಾಗೂ 2015ರಲ್ಲಿ 85 ಮಂದಿ ಮೃತಪಟ್ಟಿದ್ದಾರೆ.