ಈ ಸಹೋದರಿಯರು ನವಜಾತ ಗಂಡುಮಗುವನ್ನು ಅಪಹರಿಸಿದ್ದೇಕೆ ಗೊತ್ತೇ?

ಭರತಪುರ (ರಾಜಸ್ಥಾನ), ಜ16: ತಮ್ಮ ಸಹೋದರ ಮೃತಪಟ್ಟ ಹಿನ್ನೆಲೆಯಲ್ಲಿ ತಂದೆ ಮರುವಿವಾಹವಾಗುವುದನ್ನು ತಪ್ಪಿಸಲು ಸಹೋದರಿಯರಿಬ್ಬರು ಆಸ್ಪತ್ರೆಯಿಂದ ನವಜಾತ ಗಂಡುಮಗುವನ್ನು ಅಪಹರಿಸಿರುವ ಕುತೂಹಲಕರ ಘಟನೆ ವರದಿಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಸಹೋದರಿಯರನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನದ ಭರತಪುರ ಸರ್ಕಾರಿ ಆಸ್ಪತ್ರೆಯಿಂದ ಮಗುವನ್ನು ಅಪಹರಿಸಲಾಗಿತ್ತು. ಆದರೆ ಕೊನೆಗೆ ಮೂರು ದಿನ ಬಳಿಕ ರಸ್ತೆಬದಿಯಲ್ಲಿ ಮಗು, ಒಂದು ಟಿಪ್ಪಣಿ ಹಾಗೂ ಬಾಟಲಿಯನ್ನು ಎಸೆದಿದ್ದರು. ಆರೋಪಿಗಳನ್ನು ಶಿವಾನಿದೇವಿ (23) ಮತ್ತು ಪ್ರಿಯಾಂಕಾ ದೇವಿ (20) ಎಂದು ಗುರುತಿಸಲಾಗಿದೆ. ತಮ್ಮ 12 ವರ್ಷದ ಸಹೋದರ ಮೃತಪಟ್ಟ ಹಿನ್ನೆಲೆಯಲ್ಲಿ ತಂದೆ ಮರುವಿವಾಹಕ್ಕೆ ಯೋಚಿಸಿದ್ದರು. ಇದರಿಂದ ಖಿನ್ನತೆಗೆ ಒಳಗಾಗಿದ್ದ ತಾಯಿಗೆ ಗಂಡುಮಗುವನ್ನು ಉಡುಗೊರೆಯಾಗಿ ನೀಡಲು ಯೋಜನೆ ರೂಪಿಸಿದ್ದರು ಎಂದು ವಿಚಾರಣೆಯಿಂದ ತಿಳಿದುಬಂದಿದೆ.
ಜನವರಿ 10ರಂದು ಮಗುವನ್ನು ಅಪಹರಿಸಿದ್ದರು. ಆದರೆ ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ ಎಂಬ ಸುದ್ದಿಯನ್ನು ಪತ್ರಿಕೆಗಳಲ್ಲಿ ಓದಿದ ಬಳಿಕ ಜನವರಿ 13ರಂದು ರರಾಹ್ ಗ್ರಾಮದ ಬಳಿ ರಸ್ತೆಬದಿಯಲ್ಲಿ ಮಗುವನ್ನು ಬಿಟ್ಟು ಹೋಗಿದ್ದರು. ಇದರ ಜತೆಗೆ ಕೈಬರಹದ ಟಿಪ್ಪಣಿಯನ್ನೂ ಇಟ್ಟು, ಈ ಮಗುವನ್ನು ನೋಡಿದವರು, ಇದು ಜನವರಿ 10ರಂದು ಆಸ್ಪತ್ರೆಯಿಂದ ಕಾಣೆಯಾಗಿದ್ದ ಮಗು ಎಂದು ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಕೋರಿದ್ದರು. ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾದಿಂದ ಈ ಸಹೋದರಿಯರ ಗುರುತು ಪತ್ತೆ ಹಚ್ಚಲಾಗಿದೆ.