26/11 ಉಗ್ರರ ದಾಳಿಯಲ್ಲಿ ಬಚಾವಾದ ಇಸ್ರೇಲ್ ಬಾಲಕ ಮುಂಬೈಗೆ ಆಗಮನ

ಮುಂಬೈ, ಜ.16: 2008ರ ನವೆಂಬರ್ 26 ರಂದು ಪಾಕ್ ಉಗ್ರಗಾಮಿಗಳ ತಂಡ ವಾಣಿಜ್ಯ ನಗರಿ ಮುಂಬೈ ಮೇಲೆ ನಡೆಸಿದ ದಾಳಿಯ ವೇಳೆ ತಂದೆ-ತಾಯಿಯನ್ನು ಕಳೆದುಕೊಂಡಿದ್ದ ಇಸ್ರೇಲ್ ಬಾಲಕ ಮೋಶೆ ಹಾಲ್ಟ್ಝ್ಬರ್ಗ್ ಮುಂಬೈಗೆ ಮಂಗಳವಾರ ಆಗಮಿಸಿದ್ದಾರೆ.
ನವೆಂಬರ್ 26 ರಂದು ರಾತ್ರಿ ನಾರಿಮನ್ ಹೌಸ್ ಮೇಲೆ ದಾಳಿ ನಡೆಸಿದ್ದ ಶಸ್ತ್ರಸಜ್ಜಿತ ಉಗ್ರರು ಇಸ್ರೇಲ್ನ ಆರು ನಾಗರಿಕರನ್ನು 48 ಗಂಟೆಗಳ ಕಾಲ ಒತ್ತೆಸೆರೆಯಲ್ಲಿಟ್ಟುಕೊಂಡಿದ್ದರು. ದಾಳಿ ವೇಳೆ ದಕ್ಷಿಣ ಮುಂಬೈನ ಕೊಲಾಬದಲ್ಲಿ ಯಹೂದಿಗಳ ಆಧ್ಯಾತ್ಮಿಕ ಕೇಂದ್ರವನ್ನು ನಡೆಸುತ್ತಿದ್ದ ಮೋಶೆ ಹೆತ್ತವರಾದ ರಾಬಿ ಗಾವ್ರಿಯೆಲ್ ಹಾಗೂ ರಿವಿಕಾ ಉಗ್ರರಿಂದ ಹತರಾಗಿದ್ದರು. ರಾಬಿ ಗಾವ್ರಿಯೆಲ್ ಹಾಗೂ ರಿವಿಕಾ ಮೃತದೇಹದ ಪಕ್ಕದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ 2 ವರ್ಷದ ಬಾಲಕ ಮೋಶೆಯನ್ನು ಭಾರತದ ದಾದಿ ಸಾಂಡ್ರಾ ಸ್ಯಾಮುಯೆಲ್ ರಕ್ಷಿಸಿದ್ದರು. ದಾದಿ ಸಾಂಡ್ರಾರನ್ನು ಇಸ್ರೇಲ್ ಸರಕಾರ ಗೌರವಾನ್ವಿತ ಪೌರತ್ವ ನೀಡಿ ಗೌರವಿಸಿದೆ.
ಉಗ್ರರಿಂದ ಬಚಾವಾದ ಮೂವರ ಪೈಕಿ ಮೋಶೆ ಕೂಡ ಒಬ್ಬರಾಗಿದ್ದು, ಮೋಶೆ 10 ವರ್ಷಗಳ ಬಳಿಕ ಅಜ್ಜ-ಅಜ್ಜಿ ಜೊತೆಯಲ್ಲಿ ಮುಂಬೈಗೆ ಮಂಗಳವಾರ ಆಗಮಿಸಿದ್ದಾರೆ.
‘‘ಇದು ನಮಗೆ ಅತ್ಯಂತ ವಿಶೇಷ ದಿನ. ಮೊಶೆ ಮತ್ತೊಮ್ಮೆ ಮುಂಬೈಗೆ ಬರುವಂತೆಮಾಡಿರುವ ದೇವರಿಗೆ ಧನ್ಯವಾದ. ಮುಂಬೈ ಇದೀಗ ಹೆಚ್ಚು ಸುರಕ್ಷಿತ ತಾಣ’’ ಎಂದು ಮೋಶೆ ಅಜ್ಜ ರಾಬ್ಬಿ ಹಾಲ್ಟ್ಞ್ಬರ್ಗ್ ಹೇಳಿದ್ದಾರೆ.
ತನ್ನ ತಂದೆ-ತಾಯಿಯನ್ನು ಕಳೆದುಕೊಂಡಿರುವ ನಾರಿಮನ್ ಹೌಸ್ನ ಐದು ಅಂತಸ್ತಿನ ಕಟ್ಟಡಕ್ಕೆ ಗುರುವಾರ ಭೇಟಿ ನೀಡಲಿರುವ ಮೋಶೆ ಪ್ರಸ್ತುತ ಭಾರತ ಪ್ರವಾಸದಲ್ಲಿರುವ ತನ್ನದೇಶದ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಜ.19 ರಂದು ಸ್ವದೇಶಕ್ಕೆ ವಾಪಸಾಗಲಿದ್ದಾರೆ.