ನ್ಯಾಯಮೂರ್ತಿಗಳ ಸಂಘರ್ಷ ಇನ್ನೂ ಬಗೆಹರಿದಿಲ್ಲ: ಅಟಾರ್ನಿ ಜನರಲ್
ಸಾಂವಿಧಾನಿಕ ಪೀಠದಲ್ಲಿ ನಾಲ್ವರು ನ್ಯಾಯಮೂರ್ತಿಗಳಿಗೆ ಸ್ಥಾನವಿಲ್ಲ

ಹೊಸದಿಲ್ಲಿ, ಜ.16: ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ಸುಪ್ರೀಂಕೋರ್ಟ್ನ ನಾಲ್ವರು ಹಿರಿಯ ನ್ಯಾಯಮೂರ್ತಿಗಳ ನಡುವಿನ ಸಂಘರ್ಷ ಇನ್ನೂ ಬಗೆಹರಿದಿಲ್ಲ ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಸ್ಪ್ಪಷ್ಟ್ಟಪಡಿಸಿದ್ದಾರೆ.
ಸೋಮವಾರ ಬೆಳಗ್ಗೆ ಸುಪ್ರೀಂಕೋರ್ಟಿನ ಎಲ್ಲ ನ್ಯಾಯಮೂರ್ತಿಗಳ ಚಹಾ ಕೂಟ ನಡೆದಿದ್ದು, ಈ ವೇಳೆ ಎಲ್ಲ ಬಿಕ್ಕಟ್ಟು ಬಗೆಹರಿದಿದೆ ಎಂದು ದೇಶದ ಪ್ರಮುಖ ನ್ಯಾಯಮೂರ್ತಿಗಳು ಹೇಳಿದ್ದರು. ಆದರೆ, ಸಿಜೆಐ ದೀಪಕ್ ಮಿಶ್ರಾ ಅವರು ಸೋಮವಾರ ರಚಿಸಲಾಗಿರುವ ಸಾಂವಿಧಾನಿಕ ಪೀಠದಿಂದ ಪತ್ರಿಕಾಗೋಷ್ಠಿ ನಡೆಸಿರುವ ನಾಲ್ವರು ನ್ಯಾಯಮೂರ್ತಿಗಳನ್ನು ಹೊರಗಿಟ್ಟಿದ್ದಾರೆ. ಈಮೂಲಕ ಬಿಕ್ಕಟ್ಟು ಮುಂದುವರಿದಿದೆ.
ಕಳೆದ ವಾರ ದಿಢೀರನೇ ಪತ್ರಿಕಾಗೋಷ್ಠಿ ನಡೆಸಿದ್ದ ಜಸ್ಟಿಸ್ ಚೆಲಮೇಶ್ವರ,ರಂಜನ್ ಗೊಗೊಯ್, ಎಂಬಿ ಲೋಕೂರ್ ಹಾಗೂ ಕುರಿಯನ್ ಜೋಸೆಫ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಪ್ರಮುಖ ಪ್ರಕರಣವನ್ನು ಹಂಚಿಕೆ ಮಾಡುವುದಕ್ಕೆ ಸಂಬಂಧಿಸಿ ಟೀಕೆ ವ್ಯಕ್ತಪಡಿಸಿದ್ದರು. ಈ ನಾಲ್ವರು ನ್ಯಾಯಮೂರ್ತಿಗಳು ಮುಖ್ಯ ನ್ಯಾಯಮೂತಿಗಳ ಬಳಿಕ ಅತ್ಯಂತ ಅನುಭವಿಗಳಾಗಿದ್ದಾರೆ.
ಸೋಮವಾರ ರಚಿಸಲಾಗಿರುವ ಹೊಸ ಸಾಂವಿಧಾನಿಕ ಪೀಠದಲ್ಲಿ ಮುಖ್ಯ ನ್ಯಾಯಮೂರ್ತಿಗಳಲ್ಲದೆ ಜಸ್ಟಿಸ್ಗಳಾದ ಎ.ಕೆ. ಸಿಕ್ರಿ, ಎ.ಎಂ. ಖಾನ್ವಿಲ್ಕರ್, ಡಿ.ವೈ. ಚಂದ್ರಚೂಡ್ ಹಾಗೂ ಅಶೋಕ್ ಭೂಷಣ್ ಅವರಿದ್ದಾರೆ.
ಸೋಮವಾರದ ರೋಸ್ಟರ್ ಪ್ರಕಾರ, ಈ ನಾಲ್ವರು ನ್ಯಾಯಮೂರ್ತಿಗಳು ಆಧಾರ್ನ ಸಾಂವಿಧಾನಿಕ ಸಿಂಧುತ್ವ, ಸಲಿಂಗಕಾಮ ಮೇಲಿನ ನಿಷೇಧ ತೆಗೆದುಹಾಕಬೇಕೇ, ಶಬರಿಮಲೆ ದೇಗುಲಕ್ಕೆ ಮಹಿಳೆಯರಿಗೆ ನಿರ್ಬಂಧ ವಿಚಾರ ಹಾಗೂ ಶಾಸಕರ ವಿರುದ್ಧ ದೂರು ದಾಖಲಾಗಿ ಆರೋಪ ಸಾಬೀತುಪಡಿಸುವ ಮೊದಲೇ ಅನರ್ಹಗೊಳಿಸಬೇಕೇ ಎಂಬ ಪ್ರಕರಣದ ಬಗ್ಗೆ ವಿಚಾರಣೆ ನಡೆಸಲಿದೆ.