ಕೇವಲ 99 ರೂ. ಪಾವತಿಸಿ ವಿಮಾನದಲ್ಲಿ ಪ್ರಯಾಣಿಸಿ!
ಹೊಸ ಆಫರ್ ಘೋಷಿಸಿದೆ ಈ ವಿಮಾನಯಾನ ಸಂಸ್ಥೆ

ಮುಂಬೈ,ಜ.16 : ಏರ್ ಏಷ್ಯಾ ಇಂಡಿಯಾ ವಿಮಾನಯಾನ ಸಂಸ್ಥೆ ಕೆಲ ಆಯ್ದ ವಾಯುಮಾರ್ಗಗಳಲ್ಲಿ ರೂ. 99 ಮೂಲ ದರದಲ್ಲಿ ಟಿಕೆಟ್ ಒದಗಿಸಲಿದೆ. ಬೆಂಗಳೂರು, ಹೈದರಾಬಾದ್, ಕೊಚ್ಚಿ, ಪುಣೆ, ಕೊಲ್ಕತ್ತಾ, ಹೊಸದಿಲ್ಲಿ ಹಾಗೂ ರಾಂಚಿ ನಗರಗಳಿಗೆ ಈ ಸೇವೆ ಲಭ್ಯವಿದೆಯೆಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ರಾಂಚಿಯಿಂದ ಭುವನೇಶ್ವರಕ್ಕೆ ಟಿಜೆಟ್ ದರ ರೂ. 466 ಎಂದು ಏರ್ ಏಷ್ಯಾ ವೆಬ್ಸೈಟಿನಲ್ಲಿ ನಮೂದಿತವಾಗಿದೆ. ಈ ದರದಲ್ಲಿ ಮೂಲ ಟಿಕೆಟ್ ದರವಾದ ರೂ. 99 ಕೂಡ ಸೇರಿದೆ.
ಈ ಹೊಸ ಆಫರ್ ಅನ್ವಯ ಏರ್ ಏಷ್ಯಾ ಸಂಸ್ಥೆ ಜನವರಿ 21ರವರೆಗೆ ಬುಕ್ಕಿಂಗ್ ಸ್ವೀಕರಿಸುತ್ತದೆ ಹಾಗೂ ಈ ಟಿಕೆಟ್ ದರಗಳು ಈ ವರ್ಷದ ಜನವರಿ 31ರವರೆಗಿನ ಪ್ರಯಾಣಕ್ಕೆ ಮಾತ್ರ ಅನ್ವಯಿಸುವುದೆಂದು ಸಂಸ್ಥೆ ತಿಳಿಸಿದೆ. ವಿಮಾನ ನಿಲ್ದಾಣ ತೆರಿಗೆ ಹಾಗೂ ಇತರ ವೆಚ್ಚಗಳನ್ನು ಈ ದರ ಹೊರತುಪಡಿಸಿದೆ. ಷರತ್ತುಗಳ ಅನ್ವಯ ಎಂದು ಕಂಪೆನಿ ವೆಬ್ ಸೈಟ್ ನಲ್ಲಿ ಹೇಳಲಾಗಿದೆ.
ಏರ್ ಏಷ್ಯಾ ಇಂಡಿಯಾದ ಮಾತೃಸಂಸ್ಥೆ ಏರ್ ಏಷ್ಯಾ ಕೂಡ ಭಾರತದ ನಗರಗಳಿಂದ ಏಷ್ಯಾ ಪೆಸಿಫಿಕ್ ಪ್ರಾಂತ್ಯದ ಹತ್ತು ದೇಶಗಳಿಗೆ ಮೂಲ ಟಿಕೆಟ್ ದರ ರೂ. 1,499 ಅನ್ವಯ ಟಿಕೆಟ್ ಒದಗಿಸಲಿದೆ. ಆಕ್ಲ್ಯಾಂಡ್, ಬಾಲಿ, ಬ್ಯಾಂಕಾಕ್, ಕೌಲಾಲಂಪುರ್, ಮೆಲ್ಬೋರ್ನ್, ಸಿಂಗಾಪುರ್ ಹಾಗೂ ಸಿಡ್ನಿ ಪ್ರಯಾಣಕ್ಕೆ ಈ ಆಫರ್ ಅನ್ವಯವಾಗುತ್ತದೆ. ಈ ಆಫರ್ ಏರ್ಏಷ್ಯಾ.ಕಾಂ ಹಾಗೂ ಏರ್ ಏಷ್ಯಾ ಮೊಬೈಲ್ ಆ್ಯಪ್ ಮೂಲಕ ಮಾಡಿದ ಬುಕ್ಕಿಂಗ್ ಗೆ ಮಾತ್ರ ಅನ್ವಯವಾಗುತ್ತದೆ.