ಅದೃಷ್ಟದ ವರ್ಷ: 2017ರಲ್ಲಿ ಭಾರತದ ಪ್ರವಾಸೋದ್ಯಮ ಗಳಿಸಿದ ಆದಾಯವೆಷ್ಟು ಗೊತ್ತೆ ?

ಹೊಸದಿಲ್ಲಿ, ಜ.17: ಭಾರತದ ಪ್ರವಾಸೋದ್ಯಮಕ್ಕೆ 2017 ಅಕ್ಷರಶಃ ಸ್ಮರಣೀಯ ವರ್ಷ. ಭಾರತಕ್ಕೆ ಕಳೆದ ವರ್ಷ ಭೇಟಿ ನೀಡಿದ ವಿದೇಶಿ ಪ್ರವಾಸಿಗಳ ಸಂಖ್ಯೆ ಒಂದು ಕೋಟಿ ಮೀರಿದ್ದು, ಭಾರತ 27 ಶತಕೋಟಿ ಡಾಲರ್ ಆದಾಯವನ್ನು ಈ ವಲಯದಿಂದ ಗಳಿಸಿದೆ.
ಹೊಸ ಹಾಗೂ ವಿನೂತನ ಯೋಜನೆಗಳೊಂದಿಗೆ ಪ್ರವಾಸಿಗಳನ್ನು ಆಕರ್ಷಿಸಲು ಭಾರತವು ಇಡೀ ಪ್ರವಾಸೋದ್ಯಮ ಕ್ಷೇತ್ರಕ್ಕೆ ಕಾಯಕಲ್ಪ ನೀಡಲು ನಿರ್ಧರಿಸಿದೆ. "ಪ್ರವಾಸೋದ್ಯಮ ವಲಯ ಅದ್ಭುತವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ಈ ಸಂಖ್ಯೆಗೇ ತೃಪ್ತಿಪಡಬೇಕೇ? ಈ ಸಂಖ್ಯೆ ಗಣನೀಯವಾಗಿ ಹೆಚ್ಚಬೇಕು ಎಂಬುದು ನಮ್ಮ ಇಚ್ಛೆ. ಏಕೆಂದರೆ ಭಾರತ ನಂಬಲು ಅಸಾಧ್ಯವಾದ ಸ್ಥಳ. ಪ್ರತಿಯೊಬ್ಬರಿಗೂ, ಪ್ರತಿಯೊಂದೂ ಇಲ್ಲಿದೆ. ಆದ್ದರಿಂದ ಹೆಚ್ಚನ ಸಂಖ್ಯೆಯ ಜನರನ್ನು ಕರೆತರಲು ನಾವು ಪ್ರಯತ್ನಿಸುತ್ತಿದ್ದೇವೆ" ಎಂದು ಕೇಂದ್ರ ಪ್ರವಾಸೋದ್ಯಮ ಖಾತೆ ಸಚಿವ ಕೆ.ಜೆ.ಅಲ್ಫೋನ್ಸ್ ಮಂಗಳವಾರ ಕೊಚ್ಚಿನ್ನಲ್ಲಿ ಹೇಳಿದ್ದಾರೆ.
ಪ್ರವಾಸೋದ್ಯಮ ವಲಯ 2017ರಲ್ಲಿ ದೇಶದ ಜಿಡಿಪಿಗೆ ಶೇಕಡ 6.88ರಷ್ಟು ಕೊಡುಗೆ ನೀಡಿದ್ದು, ಒಟ್ಟು ಉದ್ಯೋಗದಲ್ಲಿ ಶೇಕಡ 12ರಷ್ಟು ಪಾಲು ಹೊಂದಿದೆ ಎಂದು ಅವರು ಅಂಕಿ ಅಂಶ ನೀಡಿದ್ದಾರೆ.
ಕಳೆದ ವರ್ಷದ ಗಣನೀಯ ಪ್ರಗತಿಯಿಂದಾಗಿ ಭಾರತ ಪ್ರವಾಸೋದ್ಯಮ ಸ್ಪರ್ಧಾತ್ಮಕ ಸೂಚ್ಯಂಕದಲ್ಲಿ 25 ಸ್ಥಾನದಷ್ಟು ಮೇಲಕ್ಕೆ ಜಿಗಿದಿದೆ. 2013ನೇ ಸಾಲಿನಲ್ಲಿ ಭಾರತ ವಿಶ್ವದಲ್ಲಿ 65ನೇ ಸ್ಥಾನದಲ್ಲಿದ್ದು, ಇದೀಗ 40ನೇ ರ್ಯಾಂಕಿಂಗ್ ಪಡೆದಿದೆ.