ಲೋಯಾ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದ ನ್ಯಾ.ಅರುಣ್ ಮಿಶ್ರಾ

ಹೊಸದಿಲ್ಲಿ, ಜ.17: ನಾಟಕೀಯ ಬೆಳವಣಿಗೆಯೊಂದರಲ್ಲಿ ಸಿಬಿಐ ವಿಶೇಷ ನ್ಯಾಯಾಧೀಶ ಬಿ.ಎಚ್.ಲೋಯಾ ಶಂಕಾಸ್ಪದ ಸಾವು ಪ್ರಕರಣದ ಸ್ವತಂತ್ರ ತನಿಖೆಗೆ ಕೋರಿ ಸಲ್ಲಿಸಲಾಗಿದ್ದ ಅಪೀಲಿನ ಮೇಲಿನ ವಿಚಾರಣೆಯ ಹೊಣೆ ಹೊತ್ತಿದ್ದ ಜಸ್ಟಿಸ್ ಅರುಣ್ ಮಿಶ್ರಾ ನೇತೃತ್ವದ ಪೀಠವು, ಈ ಪ್ರಕರಣವನ್ನು ‘ಸೂಕ್ತ ಪೀಠ’ವೊಂದರ ಮುಂದಿಡುವಂತೆ ಆದೇಶಿಸಿ ತಾನು ಈ ಪ್ರಕರಣದಿಂದೆ ಹಿಂದೆ ಸರಿದಿರುವ ಸೂಚನೆ ನೀಡಿದೆ.
‘‘ಪ್ರಕರಣದ ಎಲ್ಲಾ ದಾಖಲೆಗಳನ್ನು ಮುಂದಿನ ಏಳು ದಿನಗಳೊಳಗಾಗಿ ನೀಡಬೇಕು ಹಾಗೂ ಸೂಕ್ತವೆನಿಸಿದರೆ ಅವುಗಳ ಪ್ರತಿಗಳನ್ನು ಅಪೀಲುದಾರರಿಗೆ ನೀಡಲಾಗುವುದು. ಸೂಕ್ತ ಪೀಠದ ಮುಂದೆ ಪ್ರಕರಣ ಬರಲಿ’’ ಎಂದು ಜಸ್ಟಿಸ್ ಮಿಶ್ರಾ ಹಾಗೂ ಜಸ್ಟಿಸ್ ಮೋಹನ್ ಎಂ. ಶಾಂತನಗೌಡರ್ ಅವರ ಪೀಠ ಮಂಗಳವಾರ ಬೆಳಿಗ್ಗೆ ವಿಚಾರಣೆ ವೇಳೆ ಹೇಳಿದಾಗಲೇ ಅವರು ಈ ಪ್ರಕರಣದಿಂದ ಹಿಂದೆ ಸರಿಯಲು ಸಿದ್ಧರಾಗುತ್ತಿದ್ದಾರೆಂದೇ ಊಹಿಸಲಾಗಿತ್ತು. ಎರಡೂ ಸಾರ್ವಜನಿಕ ಹಿತಾಸಕ್ತಿ ದಾವೆಗಳ ಮೇಲೆ ಮಂಗಳವಾರ ವಿಚಾರಣೆ ನಡೆಸಿದ ನಂತರ ಅದನ್ನು ಸೂಕ್ತ ಪೀಠದ ಮುಂದಿಡುವಂತೆ ಹೇಳಿ ಜಸ್ಟಿಸ್ ಅರುಣ್ ಮಿಶ್ರಾ ಈ ಪ್ರಕರಣದಿಂದ ಹಿಂದೆ ಸರಿದಿದ್ದಾರೆ.
ಕಳೆದ ಶುಕ್ರವಾರ ಸುಪ್ರೀಂ ಕೋರ್ಟಿನ ನಾಲ್ಕು ಮಂದಿ ಹಿರಿಯ ನ್ಯಾಯಾಧೀಶರುಗಳು ಮುಖ್ಯ ನ್ಯಾಯಮೂರ್ತಿಗಳು ಸೂಕ್ಷ್ಮ ಮತ್ತು ಮಹತ್ವದ ಪ್ರಕರಣಗಳನ್ನು ಏಕಪಕ್ಷೀಯವಾಗಿ ಆಯ್ದ ಪೀಠದ ಮುಂದಿಡುತ್ತಿದ್ದಾರೆಂದು ಅವರ ವಿರುದ್ಧ ಸಿಡಿದೆದ್ದ ನಂತರ ಈ ಬೆಳವಣಿಗೆ ನಡೆದಿದೆ.
ಮಂಗಳವಾರ ಬೆಳಗ್ಗೆ ಮುಖ್ಯ ನ್ಯಾಯಮೂರ್ತಿ ತಮ್ಮ ವಿರುದ್ಧ ವಸ್ತುಶಃ ಬಂಡಾಯವೆದ್ದ ನಾಲ್ವರು ಹಿರಿಯ ನ್ಯಾಯಾಧೀಶರುಗಳಾದ ಜಸ್ಟಿಸ್ ಚೆಲಮೇಶ್ವರ್, ರಂಜನ್ ಗೊಗೋಯಿ, ಕುರಿಯನ್ ಜೋಸೆಫ್ ಹಾಗೂ ಮದನ್ ಬಿ. ಲೋಕೂರ್ ಜತೆ ಮಾತುಕತೆ ನಡೆಸಿದ ನಂತರವೂ ಲೋಯಾ ಪ್ರಕರಣವನ್ನು ಅವರು ಬೇರೊಂದು ಪೀಠಕ್ಕೆ ವಹಿಸುವ ಗೋಜಿಗೆ ಹೋಗಿರಲಿಲ್ಲ.
ಆದರೆ ಸಭೆಯಲ್ಲಿ ಜಸ್ಟಿಸ್ ಅರುಣ್ ಮಿಶ್ರಾ ಬಂಡಾಯವೆದ್ದ ನಾಲ್ವರು ನ್ಯಾಯಾಧೀಶರನ್ನು ತಮ್ಮ ಘನತೆ ಗೌರವಕ್ಕೆ ಚ್ಯುತಿ ತಂದಿದ್ದಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆಂದು ಹೇಳಲಾಗಿದ್ದು, ತಾವು ತಮ್ಮ ಸ್ವಸಾಮರ್ಥ್ಯದಿಂದಲೇ ಸುಪ್ರೀಂ ಕೋರ್ಟಿನ ನ್ಯಾಯಾಧೀಶರಾಗಿರುವುದಾಗಿಯೂ ಹೇಳಿಕೊಂಡಿದ್ದಾರೆನ್ನಲಾಗಿದೆ.