100 ಕೋ.ರೂ. ಮೌಲ್ಯದ ನಿಷೇಧಿತ ನೋಟುಗಳ ಪತ್ತೆ!

ಕಾನ್ಪುರ, ಜ.17: ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಹಾಗೂ ಉತ್ತರಪ್ರದೇಶ ಪೊಲೀಸರು ಕಾನ್ಪುರದ ನಿರ್ಮಾಣ ಹಂತದ ಮನೆಯಿಂದ ಸುಮಾರು 100 ಕೋ.ರೂ. ಮೌಲ್ಯದ ನಿಷೇಧಿತ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ.
2016ರ ನವೆಂಬರ್ನಲ್ಲಿ ನಿಷೇಧಿಸಲ್ಪಟ್ಟಿದ್ದ 500 ಹಾಗೂ 1,000 ರೂ. ಮುಖಬೆಲೆಯ ನೋಟುಗಳು ನಾಲ್ಕು-ಐದು ಜನರ ಅಥವಾ ಡಿಟರ್ಜೆಂಟ್ ತಯಾರಿಕೆಯ ಕಂಪೆನಿಗೆ ಸೇರಿದೆ ಎಂದು ಎನ್ಐಎ ಹೇಳಿದೆ.
ಅನಧಿಕೃತವಾಗಿ ಹಳೆ ನೋಟುಗಳನ್ನು ಹೊಸ ನೋಟುಗಳಾಗಿ ಪರಿವರ್ತಿಸಲು ಇಷ್ಟೊಂದು ನಗದು ಹಣವನ್ನು ಸಂಗ್ರಹಿಸಿಡಲಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಶಂಕೆ ವ್ಯಕ್ತಪಡಿಸಿದೆ.
‘‘ಕಾನ್ಪುರದ ಸ್ವರೂಪ್ ನಗರದ ನಿರ್ಮಾಣ ಹಂತದ ಕಟ್ಟಡದಲ್ಲಿ ದೊಡ್ಡ ಮೊತ್ತದ ನಿಷೇಧಿತ ಕರೆನ್ಸಿ ನೋಟುಗಳನ್ನು ಸಂಗ್ರಹಿಸಿಡಲಾಗಿದೆ ಎಂಬ ಮಾಹಿತಿ ನಮಗೆ ಲಭಿಸಿತ್ತು. ಇದರಲ್ಲಿ ಭಯೋತ್ಪಾದಕರ ಕೈವಾಡವಿಲ್ಲದಿರುವುದು ಸ್ಪಷ್ಟವಾಗಿದೆ. ಈ ಮಾಹಿತಿಯನ್ನು ಉತ್ತರಪ್ರದೇಶ ಪೊಲೀಸರೊಂದಿಗೆ ಹಂಚಿಕೊಂಡು ಜಂಟಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಎನ್ಐಎ ಅಧಿಕಾರಿ ಹೇಳಿದ್ದಾರೆ.
500 ಹಾಗೂ 1000 ರೂ. ಮುಖಬೆಲೆಯ ನೋಟುಗಳು ನಿಷೇಧಗೊಂಡ ಬಳಿಕ ಕೋಟ್ಯಂತರ ಮೌಲ್ಯದ ಹಳೆ ನೋಟುಗಳು ವಾಮಮಾರ್ಗದಿಂದ ಬ್ಯಾಂಕಿಂಗ್ ವ್ಯವಸ್ಥೆಗೆ ವಾಪಸಾಗಿವೆ. ಆರ್ಬಿಐ ಪ್ರಕಾರ 99 ಶೇ.ಕ್ಕೂ ಅಧಿಕ ನಿಷೇಧಿತ ನೋಟುಗಳು ಬ್ಯಾಂಕ್ಗೆ ವಾಪಸಾಗಿವೆ. ಎನ್ಐಎ ಈ ಹಿಂದೆ ಕಳೆದ ವರ್ಷದ ನವೆಂಬರ್ನಲ್ಲಿ ದಿಲ್ಲಿಯಲ್ಲಿ 36.34 ಕೋ.ರೂ.ಮೌಲ್ಯದ ನಿಷೇಧಿತ ನೋಟುಗಳನ್ನು ವಶಕ್ಕೆ ಪಡೆದಿದೆ.