ರಾಮಮಂದಿರ ಆಂದೋಲನ ಬಗ್ಗೆ ತೊಗಾಡಿಯಾ ಕೃತಿಯಲ್ಲಿ ಮೋದಿ ವಿರುದ್ಧ ಟೀಕಾಪ್ರಹಾರ?
ಬಿಜೆಪಿಗೆ ನುಂಗಲಾರದ ತುತ್ತಾಗಿದೆ ವಿಎಚ್ ಪಿ ನಾಯಕನ ಹೊಸ ಪುಸ್ತಕ

ಅಹ್ಮದಾಬಾದ್, ಜ.17: ತಮ್ಮನ್ನು ಪೊಲೀಸ್ ಎನ್ಕೌಂಟರ್ ಒಂದರಲ್ಲಿ ಮುಗಿಸುವ ಸಂಚು ನಡೆಸಲಾಗುತ್ತಿದೆ ಹಾಗೂ ತನ್ನ ಸದ್ದಡಗಿಸಲು ಕೇಂದ್ರ ಏಜೆನ್ಸಿಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿರುವ ವಿಶ್ವ ಹಿಂದೂ ಪರಿಷತ್ ನಾಯಕ ಪ್ರವೀಣ್ ತೊಗಾಡಿಯಾ ಸದ್ಯ ಅಯೋಧ್ಯೆಯ ರಾಮ ಮಂದಿರ ಕುರಿತಂತೆ ತಾವು ಬರೆಯುತ್ತಿರುವ ಕೃತಿಯೊಂದನ್ನು ಅಂತಿಮಗೊಳಿಸುವ ಸಿದ್ಧತೆಯಲ್ಲಿದ್ದಾರೆ ಎಂದು scroll.in ವರದಿ ಮಾಡಿದೆ.
ರಾಮಜನ್ಮಭೂಮಿ ಆಂದೋಲನ ಹಾಗೂ ಬಿಜೆಪಿಯ ಮೇಲೆ ಅದರ ಪರಿಣಾಮದ ಬಗ್ಗೆ ಈ ಕೃತಿಯಲ್ಲಿ ಬರೆಯಲಾಗಿದ್ದು, ಸಂಘಪರಿವಾರದ ನಾಯಕರು ಈ ಆಂದೋಲನಕ್ಕೆ ಹೇಗೆ ಸಹಾಯ ಮಾಡಿದ್ದಾರೆ ಹಾಗೂ ಈ ಆಂದೋಲನದ ಮೂಲಕ ರಾಜಕೀಯ ಲಾಭ ಪಡೆದವರ ಬಗ್ಗೆಯೂ ಈ ಕೃತಿಯಲ್ಲಿ ಉಲ್ಲೇಖವಿದೆಯೆನ್ನಲಾಗಿದೆ.
ಮೋದಿ ಮತ್ತು ರಾಮ ಮಂದಿರ: ಸಂಸತ್ತಿನಲ್ಲಿ ಬಹುಮತ ಹೊಂದಿರುವ ಹೊರತಾಗಿಯೂ ರಾಮ ಮಂದಿರ ನಿರ್ಮಾಣಕ್ಕೆ ಕಾನೂನೊಂದನ್ನು ಜಾರಿಗೆ ತರಲು ವಿಫಲರಾಗಿರುವ ತಮ್ಮ ಒಂದು ಕಾಲದ ಸ್ನೇಹಿತ ಹಾಗೂ ಈಗ ವೈರಿಯೆಂದೇ ಗುರುತಿಸಲ್ಪಟ್ಟಿರುವ ನರೇಂದ್ರ ಮೋದಿಯನ್ನು ಟಾರ್ಗೆಟ್ ಮಾಡಲು “ಸ್ಯಾಫ್ರನ್ ರಿಫ್ಲೆಕ್ಷನ್ಸ್: ಫೇಸಸ್ ಆ್ಯಂಡ್ ಮಾಸ್ಕ್ಸ್'' ಎಂಬ ಈ ಕೃತಿಯ ಬಹುಪಾಲನ್ನು ಉಪಯೋಗಿಸಲಾಗಿದೆ ಎನ್ನಲಾಗುತ್ತಿದೆ.
"ಪ್ರಧಾನಿಯಾಗಲು ಹಿಂದೂಗಳ ಬೆಂಬಲ ಪಡೆದ ಮೋದಿ ನಂತರ ರಾಮ ಮಂದಿರ ನಿರ್ಮಾಣಕ್ಕೆ ಯಾವುದೇ ಕ್ರಮ ಕೈಗೊಳ್ಳದೆ ಹಿಂದೂಗಳನ್ನು ಕೈಬಿಟ್ಟ ಬಗ್ಗೆ ತಮ್ಮ ಕೃತಿಯಲ್ಲಿ ತೊಗಾಡಿಯಾ ವಿವರಿಸಿದ್ದಾರೆ'' ಎಂದು ಕೃತಿಯ ಹಸ್ತಪ್ರತಿಯನ್ನು ಓದಿರುವ ಅವರ ಸಮೀಪವರ್ತಿಯೊಬ್ಬರು ತಿಳಿಸಿದ್ದಾರೆ.
"ದೇಶದಲ್ಲಿ ಸಂಪೂರ್ಣ ಗೋಹತ್ಯೆ ನಿಷೇಧ ಜಾರಿಗೊಳಸಲು ವಿಫಲರಾಗಿರುವ ಮೋದಿಯನ್ನು ಕೃತಿಯಲ್ಲಿ ಟೀಕಿಸಲಾಗಿದೆ. ಪುಸ್ತಕ ಬಹುತೇಕ ಸಿದ್ಧಗೊಂಡಿದೆ. ಡಾಕ್ಟರ್ ಸಾಬ್ (ತೊಗಾಡಿಯಾ) ತಮ್ಮ ಕೃತಿ ಪ್ರಕಟನೆಗಿಂತ ಮೊದಲು ಅಂತಿಮ ರೂಪುರೇಷೆ ನೀಡುತ್ತಿದ್ದಾರೆ'' ಎಂದವರು ಹೇಳಿದ್ದಾರೆ.
“ರಾಮ ಮಂದಿರ ನಿರ್ಮಾಣಕ್ಕೆ ಏನನ್ನೂ ಮಾಡದ ಪ್ರಧಾನಿ ಮೋದಿ” ಎಂದು ಬರೆದಿರುವ ತೊಗಾಡಿಯಾರ ಈ ಕೃತಿ ಹೊರಬಂದಲ್ಲಿ ಅದರಿಂದಾಗಿ ಮುಂದಿನ ಚುನಾವಣೆಯಲ್ಲಿ ಮತ್ತೆ ಅಯೋಧ್ಯೆ ವಿಚಾರವನ್ನೇ ತನ್ನ ಮುಖ್ಯ ಚುನಾವಣಾ ವಿಷಯವನ್ನಾಗಿಸುವ ಬಿಜೆಪಿಯ ಯೋಜನೆ ಕೈಗೂಡದು. ಪಕ್ಷ ರಾಮ ಮಂದಿರವನ್ನೇ ತನ್ನ ಮುಖ್ಯ ಚುನಾವಣಾ ಉದ್ದೇಶವನ್ನಾಗಿಸಲಿದೆ ಎಂಬುದು ಆದಿತ್ಯನಾಥ್ ಅವರನ್ನು ಉತ್ತರ ಪ್ರದೇಶ ಮುಖ್ಯಮಂತ್ರಿಯನ್ನಾಗಿಸಿದಾಗಲೇ ಸ್ಪಷ್ಟವಾಗಿತ್ತು. ಆರ್ಥಿಕ ಪ್ರಗತಿ ಕುಂಠಿತದಿಂದ ದೇಶ ಸಮಸ್ಯೆಗೀಡಾಗಿರುವ ಈ ಸಂದರ್ಭದಲ್ಲಿ ಅಯೋಧ್ಯೆ ವಿಚಾರವನ್ನೇ ನಂಬಿಕೊಂಡು ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ಮೋದಿ ಉದ್ದೇಶವೆನ್ನಲಾಗುತ್ತಿದೆ.
ತೊಗಾಡಿಯಾ ಮತ್ತು ಪ್ರಧಾನಿಯ ನಡುವಿನ ಸಂಬಂಧ ಸೌಹಾರ್ದವಾಗಿಲ್ಲ ಎಂಬುದು ರಹಸ್ಯವಾಗಿ ಉಳಿದಿಲ್ಲ. ಆದರೆ ತೊಗಾಡಿಯಾ ಅವರ ಕೃತಿ ಇನ್ನಷ್ಟೇ ಬಿಡುಗಡೆಗೊಳ್ಳಬೇಕಿರುವುದರಿಂದ ಅದು ಬಿಜೆಪಿ ನಾಯಕತ್ವಕ್ಕೆ ಎಷ್ಟು ಬೆದರಿಕೆಯೊಡ್ಡಬಹುದೆಂಬುದು ಸದ್ಯ ಅಂದಾಜಿಸುವುದು ಕಷ್ಟ. ಆದರೆ ತೊಗಾಡಿಯಾ ತಮ್ಮ ಜೀವಕ್ಕೆ ಅಪಾಯವಿದೆ ಎಂದು ಮಾಡಿರುವ ಆರೋಪವು ತಾವು ತಮ್ಮ ಕೃತಿಯಲ್ಲಿ ಅತ್ಯಂತ ಹೆಚ್ಚು ಟೀಕಿಸಿರುವ ಮೋದಿಯ ಮೇಲಿನ ದಾಳಿಯೆಂದೇ ತಿಳಿಯಲಾಗಿದೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಬೇಕೆಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ರಾಮಜನ್ಮಭೂಮಿ ಆಂದೋಲನ ಹುಟ್ಟಿಕೊಂಡಿತ್ತು. ಇದೇ ಸ್ಥಳದಲ್ಲಿದ್ದ 16ನೇ ಶತಮಾನದ ಬಾಬರಿ ಮಸೀದಿಯನ್ನು 1992ರಲ್ಲಿ ಸಂಘಪರಿವಾರದ ಕಾರ್ಯಕರ್ತರು ಧ್ವಂಸಗೊಳಿಸಿದ್ದರು. ಈ ಪ್ರಕರಣ ಇದೀಗ ನ್ಯಾಯಾಲಯದಲ್ಲಿದೆ.
ದೇಶಾದ್ಯಂತ ತನ್ನ ಜನಪ್ರಿಯತೆ ಹೆಚ್ಚಿಸಲು ಬಿಜೆಪಿಗೆ ಈ ಆಂದೋಲನ ಬಹಳಷ್ಟು ಸಹಕಾರಿಯಾಗಿ ಪರಿಣಮಿಸಿತ್ತು. 1984ರ ಚುನಾವಣೆಯಲ್ಲಿ ಕೇವಲ 2 ಸ್ಥಾನ ಗಳಿಸಿದ್ದ ಪಕ್ಷ 30 ವರ್ಷಗಳ ನಂತರ ಸಂಸತ್ತಿನಲ್ಲಿ ಸ್ಪಷ್ಟ ಬಹುಮತ ಪಡೆಯುವಷ್ಟರ ಮಟ್ಟಿಗೆ ಬೆಳೆದಿತ್ತು.
ತೊಗಾಡಿಯಾ ಅವರ ಈ ಕೃತಿ 2019ರ ಲೋಕಸಭಾ ಚುನಾವಣೆಗೆ ಮುನ್ನ ಪ್ರಕಟಗೊಂಡಲ್ಲಿ ಮತ್ತೆ ಚುನಾವಣೆಯ ಸಂದರ್ಭ ರಾಮ ಮಂದಿರ ವಿಚಾರದಿಂದ ರಾಜಕೀಯ ಲಾಭಗಳಿಸಿ ಇನ್ನೊಂದು ಐದು ವರ್ಷಗಳಿಗೆ ಅಧಿಕಾರ ಪಡೆದುಕೊಳ್ಳುವ ಬಿಜೆಪಿಯ ಯೋಜನೆಗೆ ಅದು ಅಡ್ಡಿಯಾಗಬಹುದೆಂಬುದೇ ಬಿಜೆಪಿಗರಿಗೆ ಈಗಿನ ಭಯ ಎನ್ನಲಾಗುತ್ತಿದೆ.