ಸೇನಾ ಉದ್ಯೋಗಾಕಾಂಕ್ಷಿಗಳಿಂದ ರೈಲು 'ಅಪಹರಣ'

ಭೋಪಾಲ್, ಜ. 18: ಗುಣ ಎಂಬ ಪಟ್ಟಣದಲ್ಲಿ ನಡೆಯುತ್ತಿರುವ ಸೇನಾ ನೇಮಕಾತಿ ಶಿಬಿರದಿಂದ ಮರಳುತ್ತಿದ್ದ ಅಭ್ಯರ್ಥಿಗಳು ರೈಲೊಂದನ್ನು ಅಪಹರಿಸಿ, ಪ್ರಯಾಣಿಕರಿಗೆ ಕಿರುಕುಳ ನೀಡಿ ರೈಲ್ವೆ ಆಸ್ತಿಯನ್ನು ಹಾನಿಗೊಳಿಸಿರುವ ಘಟನೆ ನಡೆದಿದೆ.
ಈ ಸೇನಾ ಉದ್ಯೋಗಾಕಾಂಕ್ಷಿಗಳ ವಿರುದ್ಧ ಕ್ರಮ ಕೈಗೊಂಡಲ್ಲಿ ಕಾನೂನು ಸುವ್ಯವಸ್ಥೆ ಸಮಸ್ಯೆ ಉದ್ಭವವಾಗಬಹುದೆಂಬ ಭಯದಿಂದ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಹೇಳಲಾಗಿದೆ.
ಜನವರಿ 8ರಂದು ಆರಂಭಗೊಂಡಿರುವ ಹಾಗೂ 22ರಂದು ಕೊನೆಗೊಳ್ಳಲಿರುವ ಈ ಶಿಬಿರದಲ್ಲಿ ಸುಮಾರು 60,000 ಅಭ್ಯರ್ಥಿಗಳು ಭಾಗವಹಿಸುತ್ತಿದ್ದು, ಹೆಚ್ಚಿನವರು ಗುಣ ಎಂಬ ಪಟ್ಟಣಕ್ಕೆ ರೈಲಿನಲ್ಲಿಯೇ ಪ್ರಯಾಣಿಸುತ್ತಿದ್ದಾರೆ.
ನೇಮಕಾತಿ ಶಿಬಿರದ ಮೊದಲ ಮೂರು ದಿನಗಳಲ್ಲಿ ಹೆಚ್ಚಿನ ಸಮಸ್ಯೆ ಗುಣ-ಗ್ವಾಲಿಯರ್ ಭಾಗದಿಂದ ವರದಿಯಾಗಿದ್ದು, ಇಷ್ಟೊಂದು ಸಂಖ್ಯೆಯ ಅಭ್ಯರ್ಥಿ ಗಳಿಂದಾಗಿ ರೈಲುಗಳು ಪ್ರಯಾಣಿಕರಿಂದ ತುಂಬಿ ತುಳುಕಿದ್ದಲ್ಲದೆ ಹಲವರು ಟಿಕೆಟ್ ರಹಿತ ಪ್ರಯಾಣ ಕೈಗೊಂಡಿದ್ದರೆನ್ನಲಾಗಿದೆ.
ಮುಖ್ಯಮಂತ್ರಿ ತೀರ್ಥ್ ದರ್ಶನ್ ಯೋಜನಾ ಪ್ರಯಾಣಿಕರಿಗಾಗಿ ಇದ್ದ ರೈಲನ್ನು ‘ಅಪಹರಿಸಿದ’ ಘಟನೆ ಜನವರಿ 11ರಂದು ನಡೆದಿತ್ತೆಂದು ಅಧಿಕಾರಿಗಳು ಹೇಳಿದ್ದಾರೆ. ಮಧ್ಯ ಪ್ರದೇಶದ ಶಿವಪುರಿಯಿಂದ ರಾಮೇಶ್ವರಂ ನಡುವೆ ಸಂಚರಿಸುವ ಈ ರೈಲು ಗುಣ ರೈಲು ನಿಲ್ದಾಣ ಪ್ರವೇಶಿಸುತ್ತಿದ್ದಂತೆಯೇ ಶಿಬಿರದಿಂದ ಹಿಂದಿರುಗುತ್ತಿದ್ದ ಸಾವಿರಾರು ಅಭ್ಯರ್ಥಿಗಳು ರೈಲಿನೊಳಗೆ ನುಗ್ಗಿ ರೈಲನ್ನು ಸುಮಾರು 100 ಕಿಮೀ ದೂರದ ಶಿವಪುರಿಗೆ ತೆಗೆದುಕೊಂಡು ಹೋಗುವಂತೆ ಚಾಲಕನನ್ನು ಬಲವಂತ ಪಡಿಸಿದ್ದರೆನ್ನಲಾಗಿದೆ. ರೈಲು ಗ್ವಾಲಿಯರ್ ತಲುಪುವ ತನಕ ತಮಗೆ ಬೇಕಾದಂತೆ ನಡೆಸಿಕೊಂಡ ಅಭ್ಯರ್ಥಿಗಳನ್ನು ರೈಲ್ವೆ ಪೊಲೀಸರು ಬಲ ಪ್ರಯೋಗಿಸಿ ಚದುರಿಸಿದ್ದಾರೆ. ಎಲ್ಲಾ ಅಭ್ಯರ್ಥಿಗಳೂ ಸ್ಥಳದಿಂದ ಪರಾರಿಯಾದ ಕಾರಣ ಯಾವುದೆ ಎಫ್ಐಆರ್ ದಾಖಲಿಸಿರಲಿಲ್ಲ.
ಆದರೆ ಇದ್ದ ಸಮಸ್ಯೆ ಸಾಲದು ಎಂಬಂತೆ ಅಲ್ಲಿಂದ ತಪ್ಪಿಸಿಕೊಂಡವರು ಆ ದಾರಿಯಲ್ಲಿ ಸಾಗುವ ಇತರ ರೈಲುಗಳನ್ನು ಹತ್ತಿ ಟಿಕೆಟ್ ಇಲ್ಲದೆಯೇ ಪ್ರಯಾಣಿಸಿದ್ದರಲ್ಲದೆ ಮಹಿಳೆಯರ ಹಾಗೂ ಎಸಿ ಕೋಚುಗಳಲ್ಲಿನ ಸೀಟುಗಳನ್ನು ಆಕ್ರಮಿಸಿದ್ದರು.
ವಿಶೇಷ ರೈಲು ಸೇವೆಯೊದಗಿಸುವಂತೆ ತಾವು ಈ ಹಿಂದೆ ಮಾಡಿದ್ದ ಮನವಿಯನ್ನು ರೈಲ್ವೆ ಇಲಾಖೆ ತಿರಸ್ಕರಿಸಿತ್ತು ಎಂದು ಸೇನಾ ಶಿಬಿರದ ನಿರ್ದೇಶಕರಾದ ಕರ್ನಲ್ ಮನೀಶ್ ಚತುರ್ವೇದಿ ಹೇಳಿದ್ದಾರೆ.
ಸಮಸ್ಯೆಗೆ ರೈಲ್ವೆ ಇಲಾಖೆ ಹಾಗೂ ಸೇನಾಧಿಕಾರಿಗಳನ್ನೇ ಜಿಲ್ಲಾಡಳಿತ ದೂಷಿಸಿದೆ.