ಸ್ಮಾರ್ಟ್ ಸಿಟಿ ಯೋಜನೆಗೆ ಹೊಸದಾಗಿ 9 ನಗರಗಳು ಆಯ್ಕೆ

ಹೊಸದಿಲ್ಲಿ, ಜ. 20: ಹಿರಿಯ ಕಾಂಗ್ರೆಸ್ ಮುಖಂಡೆ ಸೋನಿಯಾಗಾಂಧಿ ಪ್ರತಿನಿಧಿಸುತ್ತಿರುವ ರಾಯಬರೇಲಿ, ದೆಹಲಿ ಪಕ್ಕದ ಗಾಝಿಯಾಬಾದ್ ಸೇರಿದಂತೆ ಉತ್ತರ ಪ್ರದೇಶದ ನಾಲ್ಕು ನಗರಗಳು ಸ್ಮಾರ್ಟ್ ಸಿಟಿ ಗುಂಪಿಗೆ ಆಯ್ಕೆಯಾಗಲು ವಿಫಲವಾಗಿವೆ.
ಶುಕ್ರವಾರ ಹೊಸದಾಗಿ 9 ನಗರಗಳನ್ನು ಯೋಜನೆಗೆ ಆಯ್ಕೆ ಮಾಡಲಾಗಿದ್ದು, ಉದ್ದೇಶಿತ 100 ಸ್ಮಾರ್ಟ್ ಸಿಟಿಗಳ ಪೈಕಿ 99 ನಗರಗಳನ್ನು ಆಯ್ಕೆ ಮಾಡಿದಂತಾಗಿದೆ.
ಉತ್ತರ ಪ್ರದೇಶದ ಬರೇಲಿ, ಮೊರಾದಬಾದ್ ಮತ್ತು ಸಹರಣ್ಪುರ, ಬಿಹಾರದ ಬಿಹಾರ್ ಶರೀಫ್, ತಮಿಳುನಾಡಿನ ಈರೋಡ್, ದಾದ್ರ ಮತ್ತು ನಗರ್ ಹವೇಲಿಯ ಸಿಲ್ವಸ್ಸಾ, ಡಮನ್ ಮತ್ತು ಡಿಯು, ಅರುಣಾಚಲ ಪ್ರದೇಶದ ಇಟಾನಗರ ಮತ್ತು ಲಕ್ಷದ್ವೀಪದ ಕವರತ್ತಿ ನಗರಗಳು ಆಯ್ಕೆಯಾಗಿವೆ.
ಎನ್ಡಿಎ ಸರ್ಕಾರದ ಈ ಮಹತ್ವದ ಯೋಜನೆಗೆ 100 ನಗರಗಳನ್ನು ಆಯ್ಕೆ ಮಾಡುವುದಾಗಿ 2015ರ ಜೂನ್ನಲ್ಲಿ ಪ್ರಧಾನಿ ಮೋದಿ ಘೋಷಿಸಿದ್ದರು. ಶುಕ್ರವಾರ ಅಂತಿಮ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಶಿಲ್ಲಾಂಗ್ ಇದುವರೆಗೆ ಪ್ರಸ್ತಾವನೆ ಸಲ್ಲಿಸಲು ವಿಫಲವಾಗಿದೆ. ಈ ನಗರಕ್ಕೆ ಎರಡು ವಾರಗಳ ಕಾಲಾವಕಾಶ ನೀಡಲಾಗಿದ್ದು, ಅದಕ್ಕೂ ಮೊದಲು ಪ್ರಸ್ತಾವನೆ ಸಲ್ಲಿಸದಿದ್ದರೆ, ಬೇರೆ ನಗರವನ್ನು ಆಯ್ಕೆ ಮಾಡಲಾಗುವುದು ಎಂದು ಸರ್ಕಾರ ಘೋಷಿಸಿದೆ.
ರಾಜ್ಯಗಳ ಪೈಕಿ ಪಶ್ಚಿಮ ಬಂಗಾಳ ಈ ಸ್ಪರ್ಧಾತ್ಮಕ ಯೋಜನೆಯನ್ನು ಆಯ್ಕೆ ಮಾಡಿಕೊಂಡಿರಲಿಲ್ಲ. 2016ರ ಸೆಪ್ಟೆಂಬರ್ನಲ್ಲಿ ಎರಡನೇ ಪಟ್ಟಿ ಬಿಡುಗಡೆ ಮಾಡಿದಾಗ ಪಶ್ಚಿಮ ಬಂಗಾಳದ ಹೊಸ ನಗರವನ್ನು ಆಯ್ಕೆ ಮಾಡಲಾಗಿತ್ತು. ಆದರೆ ರಾಜ್ಯ ಸರ್ಕಾರ ಸಮಾರಂಭವನ್ನು ಬಹಿಷ್ಕರಿಸಿ ಹೊರ ನಡೆದ ಹಿನ್ನೆಲೆಯಲ್ಲಿ ಅನುಷ್ಠಾನದ ನಿಟ್ಟಿನಲ್ಲಿ ಯಾವ ಪ್ರಗತಿಯೂ ಆಗಿಲ್ಲ.