ಬಹುಕೋಟಿ ಮೇವು ಹಗರಣ: 3ನೇ ಪ್ರಕರಣದಲ್ಲಿ ಲಾಲೂ ಗೆ 5 ವರ್ಷ ಜೈಲು, 10 ಲಕ್ಷ ರೂ .ದಂಡ

► ಮೂರನೇ ಮೇವು ಹಗರಣದಲ್ಲಿ ಲಾಲು ಪ್ರಸಾದ್ಗೆ 5 ವರ್ಷ ಕಾರಾಗೃಹ ಶಿಕ್ಷೆ.
► ಬಿಹಾರದ ಮಾಜಿ ಮುಖ್ಯಮಂತ್ರಿ ಜಗನ್ನಾಥ ಮಿಶ್ರಾಗೆ ಕೂಡ 5 ವರ್ಷ ಕಾರಾಗೃಹ ಶಿಕ್ಷೆ.
► ಸಿಬಿಐ ನ್ಯಾಯಾಲಯ ಅಂತಿಮವಲ್ಲ. ಮೇಲಿನ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗು ವುದು ಎಂದ ಆರ್ಜೆಡಿ.
► ಇನ್ನೆರೆಡು ಪ್ರಕರಣಗಳ ತೀರ್ಪು ಮುಂದಿನ ತಿಂಗಳು ಹೊರಬೀಳುವ ಸಾಧ್ಯತೆ.
ರಾಂಚಿ, ಜ. 24: ಮೇವು ಹಗರಣದ ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿ ಬಿಹಾರದ ಮಾಜಿ ಮುಖ್ಯಮಂತ್ರಿಗಳಾದ ಲಾಲು ಪ್ರಸಾದ್ ಹಾಗೂ ಜಗನ್ನಾಥ ಮಿಶ್ರ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯ 5 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
1990ರಲ್ಲಿ ಚೈಬಾಸಾ ಟ್ರಜರಿಯಿಂದ 37.62 ಕೋ. ರೂ ತೆಗೆದು ವಂಚಿಸಿರುವುದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಲಾಲು ಪ್ರಸಾದ್ ಹಾಗೂ ಮಿಶ್ರ ತಪ್ಪೆಸಗಿದ್ದಾರೆ ಎಂದು ಸಿಬಿಐ ನ್ಯಾಯಮೂರ್ತಿ ಎಸ್.ಎಸ್. ಪ್ರಸಾದ್ ತೀರ್ಪು ನೀಡಿದರು.
ಶಿಕ್ಷೆಗೆ ಗುರಿಯಾದ 50 ಮಂದಿಯಲ್ಲಿ ಬಿಹಾರದ ಮಾಜಿ ಸಚಿವ ವಿದ್ಯಾಸಾಗರ್ ನಿಷಾದ್, ಬಿಹಾರ್ ವಿಧಾನ ಸಭೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಮುಖ್ಯಸ್ಥ ಜಗದೀಶ್ ಶರ್ಮಾ, ಮಾಜಿ ಶಾಸಕ ಧ್ರುವ ಭಗತ್, ಆರ್.ಕೆ. ರಾಣಾ ಹಾಗೂ ಮೂವರು ಮಾಜಿ ಐಎಎಸ್ ಅಧಿಕಾರಿಗಳು ಕೂಡ ಸೇರಿದ್ದಾರೆ.
69 ವರ್ಷದ ಲಾಲು ಪ್ರಸಾದ್ ಇನ್ನೊಂದು ಮೇವು ಹಗರಣಕ್ಕೆ ಸಂಬಂಧಿಸಿ ಇಲ್ಲಿನ ಬಿರ್ಸಾ ಮುಂಡಾ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.
ಪ್ರಸಕ್ತ ಪ್ರಕರಣದ ಒಟ್ಟು 76 ಆರೋಪಿಗಳಲ್ಲಿ 14 ಮಂದಿ ಮೃತಪಟ್ಟಿದ್ದಾರೆ. ಮೂವರು ಮಾಫಿ ಸಾಕ್ಷಿದಾರರಾಗಿ ಪರಿವರ್ತಿತರಾಗಿದ್ದಾರೆ. ಓರ್ವ ತಲೆ ಮರೆಸಿಕೊಂಡಿದ್ದಾನೆ. ಇಬ್ಬರಿಗೆ ಈಗಾಗಲೇ ಶಿಕ್ಷೆ ಆಗಿದೆ. ಉಳಿದ 56 ಆರೋಪಿಗಳಲ್ಲಿ ಇಬ್ಬರು ಸರಕಾರಿ ಅಧಿಕಾರಿಗಳು ಹಾಗೂ ನಾಲ್ವರು ಮೇವು ಪೂರೈಕೆದಾರರನ್ನು ಇಂದು ಖುಲಾಸೆಗೊಳಿಸಲಾಗಿದೆ.
ನ್ಯಾಯಾಲಯದಿಂದ ತೀರ್ಪು ಹೊರಬಿದ್ದ ಕೂಡಲೇ ಪ್ರತಿಕ್ರಿಯಿಸಿರುವ ಆರ್ಜೆಡಿ, ವಿಶೇಷ ಸಿಬಿಐ ನ್ಯಾಯಾಲಯದ ತೀರ್ಪು ಅಂತಿಮವಲ್ಲ. ಇದರ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ಹಾಗೂ ಅಗತ್ಯ ಬಿದ್ದರೆ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲಾಗುವುದು ಎಂದಿದೆ.
ಬಿಹಾರ್ ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಹಾಗೂ ಲಾಲು ಪ್ರಸಾದ್ ಅವರ ಪುತ್ರ ತೇಜಸ್ವಿ ಯಾದವ್ ಅವರು, ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಬಿಜೆಪಿ ಸೇರಿ ತನ್ನ ತಂದೆ ವಿರುದ್ಧ ಸಂಚು ಹೂಡಿದೆ ಎಂದು ತೇಜಸ್ವಿ ಯಾದವ್ ಆರೋಪಿಸಿದ್ದಾರೆ.