‘ಪದ್ಮಾವತ್’ ವಿವಾದ: ಶಾಲಾ ಬಸ್ ಮೇಲೆ ದಾಳಿ ನಡೆಸಿದವರ ಬಂಧನ

ಹೊಸದಿಲ್ಲಿ, ಜ.25: ಗುರುಗಾಂವ್ನಲ್ಲಿ ಶಾಲಾ ಬಸ್ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಹರ್ಯಾಣ ಪೊಲೀಸರು ಗುರುವಾರ 18 ಜನರನ್ನು ಬಂಧಿಸಿದ್ದಾರೆ.
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತ್’ ಚಲನಚಿತ್ರ ಬಿಡುಗಡೆಯನ್ನು ಪ್ರತಿಭಟಿಸಿ ಕರ್ಣ ಸೇನಾ ಸಂಘಟನೆಯ ಬೆಂಬಲಿಗರು ಬುಧವಾರ ಮಧ್ಯಾಹ್ನ ಶಾಲಾ ಬಸ್ ಮೇಲೆ ಕಲ್ಲುತೂರಾಟ ನಡೆಸಿ ಕಿಟಕಿ ಗಾಜು ಪುಡಿಪುಡಿಗೈದಿದ್ದರು. ಬಂಧಿತರನ್ನು ಗುರುಗಾಂವ್ನ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಜಿಡಿ ಗೊಯೆಂಕಾ ವರ್ಲ್ಡ್ ಸ್ಕೂಲ್ನ ಬಸ್ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದು ಶಾಲಾ ಮಕ್ಕಳು ಹಾಗೂ ಶಿಕ್ಷಕಿಯರು ಬಸ್ನ ಸೀಟಿನ ಅಡಿ ಕುಳಿತು ಅಪಾಯದಿಂದ ಪಾರಾಗಿದ್ದಾರೆ. ಶಾಲಾ ಮಕ್ಕಳು-ಶಿಕ್ಷಕಿಯರು ಭಯಭೀತರಾಗಿ ಸೀಟಿನ ಅಡಿ ಅವಿತುಕೊಂಡಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Next Story