ಪಂಜಾಬ್ ಮಾಜಿ ಸಿಎಂ ಹತ್ಯೆ: ಆರೋಪಿ ಹೇಳಿದ್ದೇನು ಗೊತ್ತೇ?

ಚಂಡೀಗಢ, ಜ.26: ಪಂಜಾಬ್ನ ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಅವರನ್ನು ಹತ್ಯೆ ಮಾಡಿದ ಬಗ್ಗೆ ವಿಷಾದವೇನೂ ಇಲ್ಲ ಎಂದು ಆರೋಪಿ ಜಗ್ತರ್ ಸಿಂಗ್ ತಾರಾ ಹೇಳಿದ್ದಾನೆ.
ಆರೋಪಿಯು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಜೆ.ಎಸ್.ಸಿಧು ಮುಂದೆ ಆರು ಪುಟಗಳ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ. ಬುರೈಲ್ ಜೈಲಿನಲ್ಲಿ ನಡೆಯುತ್ತಿರುವ ವಿಚಾರಣೆ ವೇಳೆ ಅಪರಾಧ ದಂಡ ಸಂಹಿತೆಯ ಸೆಕ್ಷನ್ 313ರ ಅನ್ವಯ ಆರೋಪಿಯ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.
ತನ್ನ ಅಪರಾಧ ಒಪ್ಪಿಕೊಂಡಿರುವುದಲ್ಲದೇ ಹತ್ಯೆ ಘಟನೆ ಬಗ್ಗೆ ಸಮಗ್ರ ವಿವರವನ್ನು ಆರೋಪಿ ನೀಡಿದ್ದಾನೆ. ಫೆಬ್ರವರಿ 7ರಂದು ಪ್ರಕರಣದ ವಿಚಾರಣೆ ಮುಂದುವರಿಯಲಿದೆ.
"ಅಮಾಯಕ ಯುವಕರ ಹತ್ಯೆ ನಡೆಯುತ್ತಿರುವ ಅಸಹನೀಯ ಪರಿಸ್ಥಿತಿಯಲ್ಲಿ, ಅನ್ಯಾಯವನ್ನು ತಾಳಿಕೊಂಡು ಕೂರಬಾರದು ಎಂಬ ಸಿಕ್ಖ್ ಇತಿಹಾಸವನ್ನು ನಾನು ಕಲಿತಿದ್ದೇನೆ. ಬಿಯಾಂತ್ ಸಿಂಗ್ ಅಧಿಕಾರಕ್ಕೆ ಬಂದ ಬಳಿಕ ತಪ್ಪಿತಸ್ಥರನ್ನು ಶಿಕ್ಷಿಸಲಿಲ್ಲ. ಮಾನವಹಕ್ಕುಗಳ ಉಲ್ಲಂಘನೆ ಮಾಡಿದ ಪೊಲೀಸ್ ಅಧಿಕಾರಿಗಳಿಗೆ ಬಿಯಾಂತ್ ಸಿಂಗ್ ಭಡ್ತಿ ನೀಡಿ, ರಾಷ್ಟ್ರಪತಿ ಪುರಸ್ಕಾರಕ್ಕೂ ಶಿಫಾರಸು ಮಾಡಿದ್ದರು" ಎಂದು ತಪ್ಪೊಪ್ಪಿಗೆ ಹೇಳಿಕೆಯಲ್ಲಿ ವಿವರಿಸಲಾಗಿದೆ.
ಈ ಹತ್ಯೆಗಾಗಿಯೇ ಕಾರು ಖರೀದಿಸಿ, ಸಿಎಂ ಹತ್ಯೆಗೆ ಸೂಕ್ತ ಅವಕಾಶಕ್ಕೆ ಕಾಯುತ್ತಿದ್ದುದಾಗಿಯೂ ಹೇಳಿದ್ದಾನೆ. ತಾರಾ ಈ ಮುನ್ನ ಬುರೈಲ್ ಜೈಲಿನಿಂದ ಇಬ್ಬರು ಸಹಕೈದಿಗಳ ಜತೆ ತಪ್ಪಿಸಿಕೊಂಡಿದ್ದ. 2015ರ ಜನವರಿಯಲ್ಲಿ ಆತನನ್ನು ಥಾಯ್ಲೆಂಡ್ ನಲ್ಲಿ ಬಂಧಿಸಲಾಗಿತ್ತು. ಆ ಬಳಿಕ ಜೈಲಿನಲ್ಲೇ ವಿಚಾರಣೆ ನಡೆಯುತ್ತಿದೆ. 1995ರ ಆಗಸ್ಟ್ 31ರಂದು ಚಂಡೀಗಢದ ಸಿವಿಲ್ ಸೆಕ್ರೆಟರಿಯೇಟ್ನ ಹೊರಗೆ ಸಂಭವಿಸಿದ ಸ್ಫೋಟದಲ್ಲಿ ಬಿಯಾಂತ್ ಹತ್ಯೆಯಾಗಿದ್ದರು. ಪಂಜಾಬ್ ಪೊಲೀಸ್ ದಿಲಾವರ್ ಸಿಂಗ್ ಮಾನವ ಬಾಂಬ್ ಆಗಿ ಕಾರ್ಯ ನಿರ್ವಹಿಸಿದ್ದ.