ಗಣರಾಜ್ಯೋತ್ಸವದ ಆಸನ ವ್ಯವಸ್ಥೆಯಲ್ಲಿ ರಾಜಕೀಯ: ಅಮಿತ್ ಶಾ ಫಸ್ಟ್, ರಾಹುಲ್ ಲಾಸ್ಟ್

ಹೊಸದಿಲ್ಲಿ, ಜ.26: ದಿಲ್ಲಿಯ ರಾಜ್ಪಥ್ನಲ್ಲಿ ಶುಕ್ರವಾರ ನಡೆದ 69ನೇ ಗಣರಾಜ್ಯೋತ್ಸವದ ವೇಳೆ ಮಾಡಲಾಗಿರುವ ಆಸನ ವ್ಯವಸ್ಥೆ ಯಲ್ಲಿ ರಾಜಕೀಯ ನುಸುಳಿದ್ದು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮೊದಲ ಸಾಲಿನ ಆಸನದಲ್ಲಿ ಕುಳಿತು ಪಥ ಸಂಚಲನ ವೀಕ್ಷಿಸಿದರೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಆರನೇ ಸಾಲಿನಲ್ಲಿ ಆಸನ ನೀಡಲಾಗಿತ್ತು.
ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಬಳಿಕ ಇದೇ ಮೊದಲ ಬಾರಿ ಪಕ್ಷದ ಅಧ್ಯಕ್ಷರಿಗೆ ಶಿಷ್ಟಾಚಾರದಂತೆ ಮೊದಲ ಸಾಲಿನಲ್ಲಿ ಆಸನ ನೀಡದೇ, ಆರನೇ ಸ್ಥಾನದಲ್ಲಿ ಆಸನ ನೀಡಿ ಅವಮಾನಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
47ರ ಹರೆಯದ ರಾಹುಲ್ ಕಾಂಗ್ರೆಸ್ನ ಹಿರಿಯ ನಾಯಕ ಹಾಗೂ ರಾಜ್ಯಸಭೆಯ ವಿಪಕ್ಷ ನಾಯಕ ಗುಲಾಮ್ ನಬಿ ಆಜಾದ್ರೊಂದಿಗೆ ಆರನೇ ಸಾಲಿನ ಆಸನದಲ್ಲಿ ಕುಳಿತು ಪಥ ಸಂಚಲನ ವೀಕ್ಷಿಸಿದರು. ಆಡಳಿತರೂಢ ಬಿಜೆಪಿ ಅಧ್ಯಕ್ಷ ಶಾ ಅವರು ಹಿರಿಯ ನಾಯಕ ಎಲ್.ಕೆ. ಅಡ್ವಾಣಿಯೊಂದಿಗೆ ಮೊದಲ ಸಾಲಿನಲ್ಲಿ ಕುಳಿತು ಗಣರಾಜ್ಯೋತ್ಸವ ಕಾರ್ಯಕ್ರಮ ವೀಕ್ಷಿಸಿದರು.
‘‘ಅಹಂಕಾರದಿಂದ ಮೆರೆದಾಡುತ್ತಿರುವ ಆಡಳಿತರೂಢ ಪಕ್ಷದವರು ವಿಶ್ವ ನಾಯಕರ ಸಮ್ಮುಖದಲ್ಲಿ ಉದ್ದೇಶಪೂರ್ವಕವಾಗಿ, ಎಲ್ಲ ಸಂಪ್ರದಾಯವನ್ನು ತಿರಸ್ಕರಿಸಿ ಕಾಂಗ್ರೆಸ್ ಅಧ್ಯಕ್ಷರನ್ನು ಆರಂಭದಲ್ಲಿ ನಾಲ್ಕನೇ, ಆನಂತರ 6ನೇ ಸಾಲಿನ ಆಸನದಲ್ಲಿ ಕುಳ್ಳಿರಿಸಿದ್ದಾರೆ. ನಮ್ಮ ಪಕ್ಷಕ್ಕೆ ರಾಜ್ಯೋತ್ಸವ ಆಚರಣೆಯು ಎಲ್ಲಕ್ಕಿಂತಲೂ ಮಿಗಿಲಾದುದು’’ ಎಂದು ಕಾಂಗ್ರೆಸ್ ಮುಖಂಡ ರಾಜ್ದೀಪ್ ಸುರ್ಜೆವಾಲಾ ಟ್ವೀಟ್ ಮಾಡಿದ್ದಾರೆ.
ರಾಹುಲ್ ಗಾಂಧಿ ಅವರ ತಾಯಿ, 19 ವರ್ಷಗಳ ಕಾಲ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಅವರಿಗೆ ಗಣರಾಜ್ಯೋತ್ಸವದಲ್ಲಿ ಯಾವಾಗಲೂ ಮೊದಲ ಸಾಲಿನಲ್ಲಿ ಆಸನ ನೀಡಲಾಗುತ್ತಿತ್ತು.