ಗಣರಾಜ್ಯೋತ್ಸವ: ಪಾಕ್ ಗಡಿಭದ್ರತಾ ಪಡೆಯೊಂದಿಗೆ ಸಿಹಿ ವಿನಿಮಯಕ್ಕೆ ಬಿಎಸ್ಎಫ್ ನಕಾರ
.jpg)
ಶ್ರೀನಗರ, ಜ.26: ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭ ಗಡಿಭಾಗದಲ್ಲಿ ಪಾಕಿಸ್ತಾನದ ಗಡಿಭದ್ರತಾ ಪಡೆಯೊಂದಿಗೆ ಸಿಹಿ ವಿನಿಮಯ ಮಾಡಿಕೊಳ್ಳುವ ಸಂಪ್ರದಾಯವನ್ನು ಈ ಬಾರಿ ಪಾಲಿಸಲು ಬಿಎಸ್ಎಫ್ ನಿರಾಕರಿಸಿದೆ. ಕದನವಿರಾಮ ಉಲ್ಲಂಘಿಸಿ ಪದೇ ಪದೇ ಗಡಿಪ್ರದೇಶದಲ್ಲಿ ಗುಂಡಿನ ದಾಳಿ ನಡೆಸುತ್ತಿರುವ ಪಾಕ್ ಪಡೆಗಳ ಕ್ರಮವನ್ನು ಖಂಡಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪಾಕ್ ಪಡೆಗಳು ನಿರಂತರವಾಗಿ ಕದನ ವಿರಾಮ ಉಲ್ಲಂಘಿಸಿ ನಡೆಸುತ್ತಿರುವ ದಾಳಿಯಿಂದಾಗಿ ಕಳೆದ ಕೆಲ ತಿಂಗಳಿನಿಂದ ಗಡಿಪ್ರದೇಶದಲ್ಲಿ ಉದ್ವಿಗ್ನದ ಪರಿಸ್ಥಿತಿ ನೆಲೆಸಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಗಣರಾಜ್ಯೋತ್ಸವ ಆಚರಣೆ ಸಂದರ್ಭ ಸಿಹಿ ವಿನಿಮಯ ಇರುವುದಿಲ್ಲ ಎಂದು ಪಾಕ್ ಗಡಿಭದ್ರತಾ ಪಡೆಗೆ ತಿಳಿಸಲಾಗಿದೆ ಎಂದು ಬಿಎಸ್ಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಈದ್, ದೀಪಾವಳಿ ಮುಂತಾದ ಪ್ರಮುಖ ಹಬ್ಬಗಳ ಸಂದರ್ಭ, ಉಭಯ ದೇಶಗಳ ಸ್ವಾತಂತ್ರ ದಿನಾಚರಣೆ, ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭ ಗಡಿಭಾಗದಲ್ಲಿ ಉಭಯ ದೇಶಗಳ ಪಡೆಗಳು ಸಿಹಿ ವಿನಿಮಯ ಮಾಡಿಕೊಳ್ಳುವ ಸಂಪ್ರದಾಯವಿತ್ತು. ಈ ಹಿಂದೆಯೂ ಕೆಲವೊಮ್ಮೆ ಸಿಹಿ ವಿನಿಮಯ ಕಾರ್ಯಕ್ರಮ ರದ್ದಾಗಿತ್ತು.