ಜಾಮೀನಿಗೆ ಆಧಾರ್ ಕಡ್ಡಾಯ: ಆದೇಶ ಬದಲಾಯಿಸಲು ಸುಪ್ರೀಂ ಸೂಚನೆ

ಹೊಸದಿಲ್ಲಿ, ಜ.26: ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸುವ ಮೊದಲು ಆತನ ಆಧಾರ್ ಕಾರ್ಡ್ ಪ್ರತಿಯನ್ನು ಕಡ್ಡಾಯವಾಗಿ ಪಡೆಯಬೇಕು ಎಂದು ಛತ್ತೀಸ್ಗಢ ಹೈಕೋರ್ಟ್ ನೀಡಿರುವ ಆದೇಶವನ್ನು 10 ದಿನದೊಳಗೆ ಬದಲಾಯಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ.
ಛತ್ತೀಸ್ಗಢ ಹೈಕೋರ್ಟ್ ಜನವರಿ 5ರಂದು ಜಾರಿಗೊಳಿಸಿದ್ದ ಆದೇಶ ನಕ್ಸಲ್ ಬಾಧಿತ ರಾಜ್ಯದಲ್ಲಿ ಭಾರೀ ಗೊಂದಲಕ್ಕೆ ಕಾರಣವಾಗಿತ್ತು ಹಾಗೂ ಹಲವಾರು ಆರೋಪಿಗಳು ಜಾಮೀನು ದೊರೆತರೂ ಬಿಡುಗಡೆ ವಾರಂಟ್ ದೊರಕದೆ ಜೈಲಿನಲ್ಲಿಯೇ ಇರಬೇಕಾದ ಅನಿವಾರ್ಯತೆ ಸೃಷ್ಟಿಸಿತ್ತು. ಆಧಾರ್ ಕಾರ್ಡ್ನ ಮಾಹಿತಿ ಹಾಗೂ ಕಂದಾಯ ದಾಖಲೆಯ ಮಾಹಿತಿಯ ಪ್ರಮಾಣೀಕರಣ ನಡೆಸುವಾಗ ಸಾಕಷ್ಟು ವಿಳಂಬವಾಗುತ್ತಿದೆ ಎಂಬ ದೂರು ಕೇಳಿಬಂದಿತ್ತು.
ಪರಿಸ್ಥಿತಿ ಇನ್ನಷ್ಟು ಹದಗೆಟ್ಟಾಗ ಬಿಲಾಸ್ಪುರ ಜಿಲ್ಲಾ ನ್ಯಾಯಾಧೀಶರು ಜನವರಿ 10ರಂದು ಹೈಕೋರ್ಟ್ಗೆ ಪತ್ರ ಬರೆದು, ಹೈಕೋರ್ಟ್ನ ಜನವರಿ 5ರ ಆದೇಶದಿಂದ ಉಂಟಾಗಿರುವ ಗೊಂದಲ ಹಾಗೂ ಸಮಸ್ಯೆಯನ್ನು ತಿಳಿಸಿದ್ದರು. ಈ ಪತ್ರವನ್ನು ವಿಚಾರಣೆಗೆ ಪರಿಗಣಿಸಿದ್ದ ಹೈಕೋರ್ಟ್ ಮುಂದಿನ ವಿಚಾರಣೆಯನ್ನು ಜನವರಿ 29ಕ್ಕೆ ನಿಗದಿಗೊಳಿಸಿದ್ದರು.
ಈ ಮಧ್ಯೆ, ವಕೀಲ ಪೀಯುಷ್ ಭಾಟಿಯಾ ಎಂಬವರು ಹೈಕೋರ್ಟ್ನ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಪ್ರಧಾನ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಹಾಗೂ ಡಿ.ವೈ.ಚಂದ್ರಚೂಡ್ ಅವರಿದ್ದ ನ್ಯಾಯಪೀಠವು, 10 ದಿನಗಳೊಳಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಛತ್ತೀಸ್ಗಢ ಹೈಕೋರ್ಟ್ಗೆ ತಿಳಿಸಿದೆ.
ಹೈಕೋರ್ಟ್ನ ಆದೇಶದಿಂದ ಜನರಿಗೆ ಬಹಳಷ್ಟು ತೊಂದರೆಯಾಗುತ್ತಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದ ಇನ್ನೊಬ್ಬ ವಕೀಲ ಪ್ರತಾಪ್, ಈ ಹಿನ್ನೆಲೆಯಲ್ಲಿ ಹೈಕೋರ್ಟ್ನ ಆದೇಶಕ್ಕೆ ತಡೆಯಾಜ್ಞೆ ನೀಡಬೇಕೆಂದು ಕೋರಿದರು. ರಾಜ್ಯವು ಎಡಪಂಥೀಯ ತೀವ್ರವಾದಿಗಳ ಸಮಸ್ಯೆ ಎದುರಿಸುತ್ತಿದ್ದು, ಜಾಮೀನು ಪಡೆದವರ ಮಾಹಿತಿಯ ಸತ್ಯಾಸತ್ಯತೆ ಪರಿಶೀಲಿಸಲು ಗ್ರಾಮೀಣ ಪ್ರದೇಶಗಳಿಗೆ ತೆರಳಬೇಕಿದ್ದರೆ ಪೊಲೀಸರು ಸಿಆರ್ಪಿಎಫ್ ಪಡೆಯ ನೆರವು ಪಡೆಯುವ ಅಗತ್ಯವಿದೆ . ಅಲ್ಲದೆ ಈ ಪ್ರಕ್ರಿಯೆ ಸಾಕಷ್ಟು ವಿಳಂಬವಾಗುವ ಕಾರಣ ಜಾಮೀನು ಪಡೆದರೂ ಆರೋಪಿಗಳು ಜೈಲಲ್ಲೇ ಕೊಳೆಯಬೇಕಾಗುತ್ತದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.