ಈ ಬಾರಿ ಒಂದೇ ಒಂದು ಪದ್ಮ ಪ್ರಶಸ್ತಿ ಗಳಿಸದ ರಾಜ್ಯ ಯಾವುದು ಗೊತ್ತಾ?

ಹೈದರಾಬಾದ್,ಜ.26: ಗುರುವಾರ ಪ್ರಕಟಗೊಂಡ 2018ನೇ ಸಾಲಿನ ಪದ್ಮಪ್ರಶಸ್ತಿಗಳು ಎರಡು ತೆಲುಗು ಭಾಷಿಕ ರಾಜ್ಯಗಳಿಗೆ ಭಾರೀ ನಿರಾಶೆಯನ್ನುಂಟು ಮಾಡಿವೆ. ತೆಲಂಗಾಣ ಶೂನ್ಯ ಸಾಧನೆಯನ್ನು ಮಾಡಿದ್ದರೆ, ಆಂಧ್ರಪ್ರದೇಶವು ಕೇವಲ ಒಂದು ಪದ್ಮಶ್ರೀ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಳ್ಳುವಂತಾಗಿದೆ. ಕಳೆದ ವರ್ಷದ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಷನ್ನ ನಾಲ್ಕು ಪಂದ್ಯಾವಳಿಗಳಲ್ಲಿ ಚಿನ್ನದ ಪದಕ ಗೆದ್ದಿದ್ದ ಶ್ರೀಕಾಂತ್ ಕಿಡಂಬಿ ಅವರು ಈ ಏಕೈಕ ಪದ್ಮಶ್ರೀ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಮೂಲಕ ತವರು ರಾಜ್ಯದ ಕಿಂಚಿತ್ ಮಾನವನ್ನುಳಿಸಿದ್ದಾರೆ.
ಇದು ಅತ್ಯಂತ ವಿಷಾದನೀಯ ಮತ್ತು ದುರದೃಷ್ಟಕರ. ಈ ಬಗ್ಗೆ ಬೇರೇನೂ ಹೇಳಲು ಸಾಧ್ಯ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಮಾಧ್ಯಮ ಸಲಹೆಗಾರ ಕೆ.ರಮಣಾಚಾರಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ತೆಲಂಗಾಣ ಸರಕಾರವು ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರಿಗೆ ಭಾರತ ರತ್ನ ಸೇರಿದಂತೆ ಈ ವರ್ಷದ ಪದ್ಮ ಪ್ರಶಸ್ತಿಗಳಿಗೆ 25 ಹೆಸರುಗಳನ್ನು ಕೇಂದ್ರಕ್ಕೆ ಶಿಫಾರಸು ಮಾಡಿತ್ತೆನ್ನಲಾಗಿದೆ.
ಪದ್ಮ ವಿಭೂಷಣ ಪ್ರಶಸ್ತಿಗಾಗಿ ಕಾಕತೀಯ ವಿವಿಯ ಮಾಜಿ ಕುಲಪತಿ ಹಾಗೂ ತೆಲಂಗಾಣ ಸಿದ್ಧಾಂತವಾದಿ ದಿ.ಪ್ರೊ.ಕೆ.ಜಯಶಂಕರ ಮತ್ತು ಯೋಜನಾ ಆಯೋಗದ ಮಾಜಿ ಸದಸ್ಯ ದಿ.ಸಿ.ಹನುಮಂತರಾವ್,ಪದ್ಮಭೂಷಣ ಪ್ರಶಸ್ತಿಗಾಗಿ ಬ್ಯಾಡ್ಮಿಂಟನ್ ಸೂಪರ್ಸ್ಟಾರ್ ಪಿ.ವಿ.ಸಿಂಧು ಮತ್ತು ಖ್ಯಾತ ಇಂಗ್ಲೀಷ್ ಲೇಖಕ ದಿ.ಪ್ರೊ.ಶಿವ ಕೆ.ಕುಮಾರ್ ಹಾಗೂ ಪದ್ಮಶ್ರೀ ಪ್ರಶಸ್ತಿಗಾಗಿ ಖ್ಯಾತ ಕವಿ ಸುದ್ದಲ ಅಶೋಕ ತೇಜಾ, ಜಾನಪದ ಗಾಯಕ ಗೊರೆಟಿ ವೆಂಕಣ್ಣ ಮತ್ತು ಶಿಕ್ಷಣತಜ್ಞ ಚುಕ್ಕಾ ರಾಮಯ್ಯ ಅವರ ಹೆಸರುಗಳೂ ತೆಲಂಗಾಣ ಸರಕಾರವು ಶಿಫಾರಸು ಮಾಡಿದ್ದ ಪಟ್ಟಿಯಲ್ಲಿದ್ದವು. ಆದರೆ ಈ ಪೈಕಿ ಒಬ್ಬರಿಗೂ ಪದ್ಮಪ್ರಶಸ್ತಿ ಒಲಿದಿಲ್ಲ.
ಪಿ.ವಿ.ಸಿಂಧು ಅವರ ಹೆಸರನ್ನು ಆಂಧ್ರ ಪ್ರದೇಶ ಸರಕಾರವೂ ಶಿಫಾರಸು ಮಾಡಿತ್ತು. ಜೊತೆಗೆ ಆನಂದ ಶಂಕರ ಜಯಂತ(ಕೂಚಿಪುಡಿ), ಚಗಂತಿ ಕೋಟೇಶ್ವರ ರಾವ್ (ಆಧ್ಯಾತ್ಮಿಕ) ಮತ್ತು ಡಾ.ವಿಷ್ಣುಸ್ವರೂಪ ರೆಡ್ಡಿ(ವೈದ್ಯಕೀಯ) ಅವರಂತಹ ಪ್ರತಿಷ್ಠಿತರ ಹೆಸರುಗಳೂ ಅದರ ಶಿಫಾರಸು ಪಟ್ಟಿಯಲ್ಲಿದ್ದವು.
ಕಳೆದ ವರ್ಷ ತೆಲಂಗಾಣ ಐದು ಮತ್ತು ಆಂಧ್ರಪ್ರದೇಶ ಮೂರು ಪದ್ಮ ಪ್ರಶಸ್ತಿಗಳನ್ನು ಪಡೆದಿದ್ದವು.