ಮೈನವಿರೇಳಿಸಿದ ಬಿಎಸ್ಎಫ್ ಮಹಿಳಾ ಪಡೆಯ ಬೈಕ್ ಸಾಹಸ
ಗಣರಾಜ್ಯೋತ್ಸವ ಸಂಭ್ರಮ

ಹೊಸದಿಲ್ಲಿ, ಜ.26: ಈ ಬಾರಿ ದಿಲ್ಲಿಯಲ್ಲಿ ನಡೆದ ಗಣರಾಜ್ಯೋತ್ಸವ ಸಂಭ್ರಮವು ಹಲವು ಪ್ರಥಮಗಳಿಗೆ ಸಾಕ್ಷಿಯಾಯಿತು. ಅವುಗಳಲ್ಲಿ ಪ್ರಮುಖವಾದುದೆಂದರೆ ಗಡಿಭದ್ರತಾ ಪಡೆಯ ಮಹಿಳಾ ತಂಡವು ಪ್ರದರ್ಶಿಸಿದ ಬೈಕ್ ಸಾಹಸ. ಬಿಎಸ್ಎಫ್ನ ಮಹಿಳಾ ತಂಡವು ಬೈಕ್ ಮೇಲೇರಿ ಪ್ರದರ್ಶಿಸಿದ ಸಾಹಸಗಳು ನೋಡುಗರ ಮೈನವಿರೇಳುವಂತೆ ಮಾಡಿತು. ಮಹಿಳಾ ಯೋಧರ ಸಾಹಸವನ್ನು ಕಂಡು ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ಬಾರಿಸಿದರು.
ಸಂಪ್ರದಾಯದ ಪ್ರಕಾರ ಗಣರಾಜ್ಯೋತ್ಸವ ದಿನದಂದು ದಿಲ್ಲಿಯಲ್ಲಿ ಗಡಿಭದ್ರತಾ ಪಡೆ ಮತ್ತು ಸೇನೆಯು ವರ್ಷಕ್ಕೊಬ್ಬರಂತೆ ಬೈಕ್ ಸಾಹಸವನ್ನು ಪ್ರದರ್ಶಿಸುತ್ತಾರೆ. ಆದರೆ ಈ ಬಾರಿ ಬಿಎಸ್ಎಫ್ನ ಮಹಿಳಾ ಮೋಟರ್ ಸೈಕಲ್ ತಂಡ ಸೀಮಾ ಭವಾನಿಯು ತಮ್ಮ ಪುರುಷ ಸೈನಿಕರ ಬದಲಾಗಿ ಪ್ರದರ್ಶನ ನೀಡಿತು. ಉಪನಿರೀಕ್ಷಕಿ ಸ್ಟಾಂಝಿನ್ ನೊರ್ಯಂಗ್ ಅವರ ನೇತೃತ್ವದಲ್ಲಿ ಮಹಿಳಾ ತಂಡವು, ರಾಷ್ಟ್ರಪತಿಯವರಿಗೆ ಗೌರವ ಸೂಚನೆ, ಪ್ರಚಂಡ ಬಾಲಾಯ ಶಕ್ತಿಮಾನ್ ಹೀಗೆ ಹಲವು ಬೈಕ್ ಸ್ಟಂಟ್ಗಳನ್ನು ಪ್ರದರ್ಶಿಸಿತು. 350 ಸಿಸಿಯ 26 ರೋಯಲ್ ಎನ್ಫೀಲ್ಡ್ ಬುಲೆಟ್ ಬೈಕ್ಗಳನ್ನೇರಿದ ನೂರಕ್ಕೂ ಅಧಿಕ ಮಹಿಳೆಯರು ಪುರುಷರು, ಮಹಿಳೆಯರು, ಮಕ್ಕಳೆನ್ನದೆ ಎಲ್ಲರನ್ನೂ ಮನರಂಜಿಸಿದರು ಮತ್ತು ತಮ್ಮ ಸಾಹಸ ಕಂಡು ಬೆರಗಾಗುವಂತೆ ಮಾಡಿದರು. ರಾಷ್ಟ್ರಪತಿಗಳಾದ ರಾಮ್ ನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಆಸಿಯಾನ್ ನಾಯಕರು ಹಾಗೂ ಇತರ ಗಣ್ಯರು ಬಿಎಸ್ಎಫ್ ಮಹಿಳಾ ಪಡೆಯ ಬೈಕ್ ಸಾಹಸವನ್ನು ಚಪ್ಪಾಳೆ ಬಾರಿಸುವ ಮೂಲಕ ಪ್ರೋತ್ಸಾಹಿಸಿದರು.
2015ರಲ್ಲಿ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಮಹಿಳಾ ತಂಡಗಳು ರಾಷ್ಟ್ರೀಯ ಪಥಸಂಚಲನದಲ್ಲಿ ಪಾದಾರ್ಪಣೆ ಮಾಡಿದ್ದವು.