ಬಿಜೆಪಿಯನ್ನು ಸೋಲಿಸಲು ಸಮಾನ ಮನಸ್ಕ ಪಕ್ಷಗಳಿಂದ ಸಂವಿಧಾನ ರಕ್ಷಿಸಿ ಜಾಥಾ: ಶರದ್ ಪವಾರ್

ಹೊಸದಿಲ್ಲಿ, ಜ.26: ಬಿಜೆಪಿಯನ್ನು ಸೋಲಿಸುವ ಸಲುವಾಗಿ ಜನವರಿ 29ರಂದು ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಸಮಾನ ಮನಸ್ಕ ಪಕ್ಷಗಳು ಸಂವಿಧಾನ ರಕ್ಷಿಸಿ ಜಾಥಾವನ್ನು ನಡೆಸುವುದಾಗಿ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಘೋಷಿಸಿದ್ದಾರೆ.
ಜಾಥಾಗೂ ಮುನ್ನ ಶರದ್ ಪವಾರ್ ಜೊತೆಗೆ ವಿರೋಧ ಪಕ್ಷದ ನಾಯಕರಾದ ಶರದ್ ಯಾದವ್, ಡಿ. ರಾಜಾ, ಹಾರ್ದಿಕ್ ಪಟೇಲ್, ಓಮರ್ ಅಬ್ದುಲ್ಲಾ, ದಿನೇಶ್ ತ್ರಿವೇದಿ ಮತ್ತು ಸುಶೀಲ್ ಕುಮಾರ್ ಶಿಂದೆ ಹಾಗೂ ಇತರರು ಮಹಾರಾಷ್ಟ್ರದ ವಿರೋಧ ಪಕ್ಷದ ನಾಯಕ ರಾಧಾಕೃಷ್ಣ ವಿಖೆ ಪಾಟಿಲ್ ಅವರ ದಕ್ಷಿಣ ಮುಂಬೈಯ ನಿವಾಸದಲ್ಲಿ ಭೇಟಿಯಾದರು.
ಸಂವಿಧಾನ ರಕ್ಷಿಸಿ ಜಾಥವು 2019ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ವಿರೋಧಿ ಶಕ್ತಿಗಳನ್ನು ಒಟ್ಟುಗೂಡಿಸಲು ಮಾಡುತ್ತಿರುವ ಪ್ರಯತ್ನ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ಬಿಜೆಪಿಯು ಮುಂಬೈಯಲ್ಲಿ ತಿರಂಗಾ ಯಾತ್ರೆಯನ್ನು ನಡೆಸಲು ಯೋಜಿಸಿದೆ.
ಸಂವಿಧಾನ ರಕ್ಷಿಸಿ ಜಾಥಾದಲ್ಲಿ ಭಾಗವಹಿಸುವವರು ಮುಂಬೈ ವಿಶ್ವವಿದ್ಯಾಲಯ ಸಮೀಪವಿರುವ ಡಾ. ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆಯ ಹತ್ತಿರ ಒಟ್ಟುಗೂಡಿ ನಂತರ ಗೇಟ್ವೇ ಆಫ್ ಇಂಡಿಯಾದಲ್ಲಿರುವ ಶಿವಾಜಿ ಮಹಾರಾಜರ ಪ್ರತಿಮೆಯತ್ತ ಮೆರವಣಿಗೆಯಲ್ಲಿ ಸಾಗುವರು ಎಂದು ಜಾಥಾದ ಸಂಚಾಲಕರಾದ ಮಹಾರಾಷ್ಟ್ರದ ಸ್ವತಂತ್ರ ಸಂಸದ ರಾಜು ಶೆಟ್ಟಿ ತಿಳಿಸಿದ್ದಾರೆ.