ಪೊಲೀಸ್ ಗೋಲಿಬಾರಿಗೆ ಇಬ್ಬರು ಮೃತ್ಯು
ಆರೆಸ್ಸೆಸ್ ನಾಯಕನ ಹೇಳಿಕೆ ವಿರೋಧಿಸಿ ಪ್ರತಿಭಟನೆ

ಗುವಹಾಟಿ,ಜ.27 : ಅಸ್ಸಾಂ ರಾಜ್ಯದ ದಿಮಾ ಹಸಾವೊ ಎಂಬ ಗ್ರಾಮವನ್ನು ಗ್ರೇಟರ್ ನಾಗಾಲ್ಯಾಂಡ್ ಗೆ ಸೇರ್ಪಡೆಗೊಳಿಸಲು ನಡೆಯುತ್ತಿದೆಯೆನ್ನಲಾದ ಯತ್ನವನ್ನು ವಿರೋಧಿಸಿ ಆಯೋಜಿಸಲಾಗಿದ್ದ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತೆರಳಿದ ನಂತರ ನಡೆದ ಪೊಲೀಸ್ ಗೋಲಿಬಾರಿನಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ದಿಮಾಸ ಆದಿವಾಸಿಗಳು ವಾಸಿಸುವ ದಿಮಾ ಹಸಾವೋ ಜಿಲ್ಲೆಯನ್ನು ಗ್ರೇಟರ್ ನಾಗಾಲ್ಯಾಂಡ್ ಗೆ ಸೇರಿಸಲಾಗುವುದೆಂದು ನಾಗಾ ಶಾಂತಿ ಒಪ್ಪಂದದ ಕರಡು ಪ್ರತಿಯಲ್ಲಿ ಹೇಳಲಾಗಿದೆ ಎಂದು ಆರೆಸ್ಸೆಸ್ ಪದಾಧಿಕಾರಿಯೊಬ್ಬರು ಹೇಳಿದ್ದಾರೆಂದು ಕೆಲ ದಿನಗಳ ಹಿಂದೆ ಬಂದ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಪ್ರತಿಭಟನೆಗಳು ನಡೆಯುತ್ತಿವೆ.
ಗುರುವಾರ ಈ ಹಿನ್ನೆಲೆಯಲ್ಲಿ 12 ಗಂಟೆಗಳ ಬಂದ್ ಕರೆ ಕೂಡ ನೀಡಲಾಗಿತ್ತು. ಈ ಸಂದರ್ಭ ಪ್ರತಿಭಟನಾಕಾರರು ಮೈಬೊಂಗ್ ರೈಲು ನಿಲ್ದಾಣದಲ್ಲಿ ಪೊಲೀಸರ ಜತೆ ಸಂಘರ್ಷಕ್ಕಿಳಿದಿದ್ದು ರೈಲು ಹಳಿಗಳನ್ನು ಹಾನಿಗೈದು ರೈಲ್ವೆ ನಿಲ್ದಾಣದಲ್ಲೂ ದಾಂಧಲೆಗೈದಿದ್ದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಗುಂಡು ಹಾರಿಸಿದ್ದು ಈ ಸಂದರ್ಭ ಐದು ಮಂದಿ ಪ್ರತಿಭಟನಾಕಾರರು ಗಾಯಗೊಂಡಿದ್ದರು. ಅವರಲ್ಲೊಬ್ಬ ಗುರುವಾರ ಸಂಜೆಯೇ ಮೃತಪಟಿದ್ದರೆ ಇನ್ನೊಬ್ಬ ಶುಕ್ರವಾರ ಸಾವಿಗೀಡಾಗಿದ್ದಾನೆ. ಘಟನೆಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಯೂ ಗಾಯಗೊಂಡಿದ್ದಾರೆ.
ದಿಮಾ ಹಸಾವೋ ಜಿಲ್ಲೆಯಲ್ಲಿ ವಾಸಿಸುವ ನಾಗಾಗಳಿಗಾಗಿ ಬೋಡೋಲ್ಯಾಂಡ್ ಟೆರಿಟೋರಿಯಲ್ ಕೌನ್ಸಿಲ್ ನ ಮಾದರಿಯಲ್ಲಿಯೇ ಸ್ವಾಯತ್ತ ಸಂಸ್ಥೆ ರಚಿಸುವುದರ ವಿರುದ್ಧವಾಗಿದ್ದಾರೆ.