ಲೈಂಗಿಕ ಕಿರುಕುಳ: ವಿದ್ಯಾರ್ಥಿನಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ

ಲಕ್ನೋ, ಜ.29: ಶಾಲೆಯ ಪ್ರಾಂಶುಪಾಲರ ಮಗ ಲೈಂಗಿಕ ಹಲ್ಲೆ ನಡೆಸಲು ಮುಂದಾಗಿದ್ದರಿಂದ ಬೇಸತ್ತ 12ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ದಿಯೋರಿಯಾ ಎಂಬಲ್ಲಿ ನಡೆದಿದೆ.
ವಿದ್ಯಾರ್ಥಿನಿಯ ಅಜ್ಜಿ ನೀಡಿದ ದೂರಿನ ಮೇರೆಗೆ ಶಾಲೆಯ ಪ್ರಾಚಾರ್ಯ ಸೇರಿದಂತೆ ಆರು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಗೌರಿ ಬಜಾರ್ ಪೊಲೀಸ್ ಠಾಣೆಯ ಅಧಿಕಾರಿ ಅನಿಲ್ ಕುಮಾರ್ ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ನಾಲ್ಕು ಮಂದಿಯನ್ನು ವಿಚಾರಣೆಗೆ ಗುರಿಪಡಿಸಲಾಗಿದ್ದು, ಮುಖ್ಯ ಆರೋಪಿ ಹಾಗೂ ಖಾಸಗಿ ಶಾಲೆಯ ಪ್ರಾಚಾರ್ಯನ ಮಗ ಸೇರಿದಂತೆ ತಲೆಮರೆಸಿಕೊಂಡಿರುವ ಆರು ಮಂದಿಯ ಶೋಧಕ್ಕೆ ಜಾಲ ಬೀಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಮುಖ್ಯ ಆರೋಪಿ, ವಿದ್ಯಾರ್ಥಿನಿಯನ್ನು ಪ್ರಾಚಾರ್ಯರ ಕೊಠಡಿಗೆ ಕರೆದು ಲೈಂಗಿಕ ಕಿರುಕುಳ ನೀಡಿ, ಬಳಿಕ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದ ಎಂದು ಹೇಳಲಾಗಿದೆ. ಆದರೆ ಕಿಟಕಿ ಮೂಲಕ ಈ ಘಟನೆಯನ್ನು ನೋಡಿದ ಸ್ಥಳೀಯರು ವಿದ್ಯಾರ್ಥಿನಿಯ ಅಣ್ಣನಿಗೆ ವಿಷಯ ತಲುಪಿಸಿದರು. ಆತ ಆರೋಪಿಯನ್ನು ಥಳಿಸಿದ. ಪ್ರತೀಕಾರವಾಗಿ ಆರೋಪಿ, ಸ್ನೇಹಿತರ ಗುಂಪು ಕಟ್ಟಿಕೊಂಡು ವಿದ್ಯಾರ್ಥಿನಿಯ ಮನೆಗೆ ಬಂದು ಆಕೆಯ ಸಹೋದರನ ಮೇಲೆ ಹಲ್ಲೆ ನಡೆಸಿದ ಎಂದು ಹೇಳಲಾಗಿದೆ.
ಇದರಿಂದ ಆಘಾತಕ್ಕೊಳಗಾದ ವಿದ್ಯಾರ್ಥಿನಿ ತನ್ನ ಕೋಣೆಗೆ ತೆರಳಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸ್ ದೂರು ದಾಖಲಾಗಿದೆ.. ಘಟನೆ ಹಿನ್ನೆಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿದ್ದು, ಜನ ಠಾಣೆಯ ಮುಂದೆ ಜಮಾಯಿಸಿ, ಆರೋಪಿಯನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿದರು.